ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ವಿವರ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಗಜಪಯಣಕ್ಕೆ ಚಾಲನೆ ನೀಡಲಾಗಿದ್ದು ಗಜಪಡೆಗಳು ಮೈಸೂರಿನತ್ತ ಪಯಣ ಬೆಳಸಿವೆ.

ಈ ಬಾರಿಯ ದಸರಾ ಮಹೋತ್ಸವದಲ್ಲಿ ಕೇವಲ ಐದು ಆನೆಗಳು ಪಾಲ್ಗೊಳ್ಳುತ್ತಿದ್ದು ಅಭಿಮನ್ಯು, ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ಮೈಸೂರಿಗೆ ಆಗಮಿಸಿವೆ.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ವಿವರ ಇಂತಿದೆ:

ಅಭಿಮನ್ಯು: ಗಂಡಾನೆ 54ವರ್ಷ, ಮತ್ತಿಗೋಡು ಆನೆ ಶಿಬಿರ, ವಸಂತ ಮಾವುತ, ಕಾವಾಡಿ ರಾಜು, ಶರೀರದ ಎತ್ತರ 2.68ಮೀಟರ್, ಶರೀರದ ಉದ್ದ 3.51ಮೀಟರ್, ಅಂದಾಜು ತೂಕ 5000-5290ಕೆಜಿ, ಇದನ್ನು 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು ಈ ಆನೆಯ ವಿಶೆಷ ಗುಣವೆಂದರೆ ಕಾಡಾನೆಯನ್ನು ಸೆರೆ ಹಿಡಿಯುವ , ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿದೆ. ಈ ಆನೆಯು ಸುಮಾರು 21ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, 2015ರವರೆಗೂ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿಯನ್ನು ನಿರ್ವಹಿಸಿದೆ.

ವಿಕ್ರಮ: ಗಂಡಾನೆ 47ವರ್ಷ, ದುಬಾರೆ ಆನೆ ಶಿಬಿರ, ಮಾವುತ ಜೆ.ಕೆ.ಪುಟ್ಟ, ಕಾವಾಡಿ ಹೇಮಂತ್ ಕುಮಾರ್, ಶರೀರದ ಎತ್ತರ 2.60ಮೀಟರ್, ಶರೀರದ ಉದ್ದ 3.43ಮೀಟರ್, ಅಂದಾಜು ತೂಕ 3820ಕೆಜಿ, ಈ ಆನೆಯನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಈ ಆನೆಯು 16ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 2015ರಿಂದ ಪಟ್ಟದ ಆನೆಯಾಗಿ ಅರಮನೆಯ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸುತ್ತಿದೆ.

ಗೋಪಿ: ಗಂಡಾನೆ 38ವರ್ಷ, ದುಬಾರೆ ಆನೆ ಶಿಬಿರ, ಮಾವುತ ನಾಗರಾಜು, ಕಾವಾಡಿ ಶಿವು, ಶರೀರದ ಎತ್ತರ 2.92ಮೀಟರ್, ಶರೀರದ ಉದ್ದ 3.42ಮೀಟರ್, ಅಂದಾಜು ತೂಕ 3710 ಕೆಜಿ, ಈ ಆನೆಯನ್ನು 1993ರಲ್ಲಿ ಕಾರೇಕೊಪ್ಪ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ. ಈ ಆನೆಯು ದುಬಾರೆ ಆನೆ ಶಿಬಿರದಲ್ಲಿ ಸಫಾರಿ ಕೆಲಸವನ್ನು ನಿರ್ವಹಿಸುತ್ತಿದ್ದು, 10ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

ವಿಜಯ: ಹೆಣ್ಣಾನೆ 61ವರ್ಷ, ದುಬಾರೆ ಆನೆ ಶಿಬಿರ, ಮಾವುತ ಭೋಜಪ್ಪ, ಕಾವಾಡಿ ಭರತ್ ಬಿ.ಪಿ, ಶರೀರದ ಎತ್ತರ 2.29ಮೀಟರ್, ಶರೀರದ ಉದ್ದ 3.00ಮೀಟರ್, ಅಂದಾಜು ತೂಕ 3250ಕೆಜಿ, ಈ ಆನೆಯು ತುಂಬಾ ಸಾಧು ಸ್ವಭಾವದಾಗಿದ್ದು, ಇದನ್ನು 1963ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು ಇದು 13ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

ಕಾವೇರಿ: ಹೆಣ್ಣಾನೆ, 42ವರ್ಷ, ದುಬಾರೆ ಆನೆ ಶಿಬಿರ, ಮಾವುತ ಜೆ.ಕೆ.ದೋಬಿ, ಕಾವಾಡಿ ರಂಜನ್ ಜೆ.ಎ., ಶರೀರದ ಎತ್ತರ 2.50ಮೀಟರ್, ಶರೀರದ ಉದ್ದ 3.32ಮೀಟರ್, ಅಂದಾಜು ತೂಕ 3000-3220 ಕೆಜಿ, ಈ ಆನೆಯನ್ನು ಫೆಬ್ರವರಿ 2009ರಂದು ಸೋಮವಾರಪೇಟೆ ಆಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಇದು 9ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

Scroll to Top