ಮೈಸೂರು: ಚಾಲೆಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅರಣ್ಯದಲ್ಲಿ ಸೆರೆ ಹಿಡಿದಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ನಡೆಯಲಿದೆ.
‘ಲೈಫ್ ಆನ್ ದಿ ವೈಲ್ಡ್ ಸೈಡ್’ ಹೆಸರಿನಲ್ಲಿ ನಟ ದರ್ಶನ್ ಅರಣ್ಯದಲ್ಲಿ ಸೆರೆ ಹಿಡಿದಿರುವ ಛಾಯಾಚಿತ್ರಗಳ ಪ್ರದರ್ಶನ ಆಯೋಜನೆಗೊಳ್ಳುತ್ತಿದೆ. ದರ್ಶನ್ ಸೆರೆ ಹಿಡಿದ ಛಾಯಚಿತ್ರಗಳ ಮಾರಾಟ ಕೂಡ ಇದ್ದು, ಮಾರಾಟದಿಂದ ಬಂದ ಹಣ ವನ್ಯಜೀವಿ ಸಂರಕ್ಷಣಾ ನಿಧಿಗೆ ಬಳಕೆಯಾಗಲಿದೆ.
ಒಂದು ಛಾಯಾಚಿತ್ರಕ್ಕೆ ಎರಡರಿಂದ ಎರಡೂವರೆ ಸಾವಿರ ನಿಗದಿ ಮಾಡಲಾಗಿದ್ದು, ಎರಡೂವರೆ ಸಾವಿರ ಕೊಟ್ಟರೆ ದರ್ಶನ್ ಆಟೋಗ್ರಾಫ್ ಇರುವ ಚಿತ್ರ ಲಭ್ಯವಾಗಲಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜನೆಗೊಳ್ಳುತ್ತಿದೆ.
ಈ ಬಗ್ಗೆ ದರ್ಶನ್ ಅವರು ಟ್ವಿಟ್ಟರಿನಲ್ಲಿ ತಾವು ಸಫಾರಿಗೆ ತೆರಳಿದ್ದಾಗ ಪ್ರಾಣಿಗಳ ಫೋಟೋ ಕ್ಲಿಕ್ಕಿಸುತ್ತಿರುವ ವಿಡಿಯೋವನ್ನು ಹಾಕುವುದರ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.