ಮೈಸೂರಿನಲ್ಲಿ ಇಂದಿನಿಂದ ಮಾಗಿ ಉತ್ಸವ: 10 ದಿನಗಳ ಕಾಲ ಮನರಂಜನೆ ನೀಡಲು ಅರಮನೆ ಅಂಗಳ ಸಜ್ಜು

ಮೈಸೂರು: ದಸರಾ ನಂತರ ವರ್ಷಾಂತ್ಯ-2020ರ ಹೊಸ ವರ್ಷಾರಂಭದಲ್ಲಿ ವಿಶಿಷ್ಟವಾಗಿ ಪ್ರವಾಸಿಗರನ್ನು ಆಕರ್ಷಿಸಲು ಮೈಸೂರು ಜಿಲ್ಲಾಡಳಿತ ಸಜ್ಜಾಗಿದೆ.

ಹೊಸ ವರ್ಷಾಚರಣೆಯ ಸಂಭ್ರಮ ಇಮ್ಮಡಿಗೊಳಿಸುವ ‘ಮೈಸೂರು ಮಾಗಿ ಉತ್ಸವ’ ಮತ್ತೆ ರಸದೌತಣ ಉಣಬಡಿಸಲು ಬಂದಿದೆ. ಅರಮನೆ ಅಂಗಳದಲ್ಲಿ ಡಿ.24ರಂದು ಸಂಜೆ 4ಕ್ಕೆ ಚಾಲನೆ ದೊರೆಯಲಿದ್ದು, 10 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡಲು ಸಜ್ಜಾಗಿದೆ.

ಫ‌ಲಪುಷ್ಪ ಪ್ರದರ್ಶನ:

ಮಾಗಿ ಉತ್ಸವ ಅಂಗವಾಗಿ ಅರಮನೆ ಆವರಣದಲ್ಲಿ ಫ‌ಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಫ‌ಲಪುಷ್ಪ ಪ್ರದರ್ಶನಕ್ಕೆ ಈ ವರ್ಷ ಮೆರಿಗೋಲ್ಡ್‌, ಸಾಲ್ವಿಯ, ಡೇಲಿಯ, ಕಾಕ್ಸೂಂಬ್‌, ಪಿಟೋನಿಯ, ಸೇವಂತಿಗೆ, ಕೋಲಿಯಸ್‌, ಸಲೋಷಿಯ, ನಸ್ಟರ್‌ಸಿಯಂ, ಆಂಟಿರೈನಂ, ಬೋನ್ಸಾಯ್‌ ಗಿಡಗಳು ಸೇರಿದಂತೆ 32 ಬಗೆಯ ಹೂವಿನ ಗಿಡಗಳು ಸೇರಿದಂತೆ ಸುಮಾರು 20 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳು, ಗುಲಾಬಿ, ಕ್ರೈಸಾಂಥಿಯಮ್‌, ಪಿಂಗ್‌ಪಾಂಗ್‌, ಕಾರ್ನೆಷನ್‌, ಆಸ್ಟ್ರಮೇರಿಯ, ಜರ್ಬೆರಾ, ಆಂಥೋರಿಯಮ್‌, ಆರ್ಕಿಡ್ಸ್‌, ಬ್ಲೂ ಡೈಸಿ, ಡ್ರೆಸಿನಾ ಮತ್ತಿತರೆ ಅಂದಾಜು 4 ಲಕ್ಷ ಅಲಂಕಾರಿಕ ಹೂವುಗಳು ಹಾಗೂ ಊಟಿ ಕಟ್‌ ಹೂವುಗಳಿಂದ ಅಲಂಕರಿಸಲಾಗುತ್ತದೆ.

ಮೈಸೂರಿನಲ್ಲಿ ಬೆಂಗಳೂರು ಅರಮನೆ:

ಈ ಸಲ ವಿವಿಧ ಆಕೃತಿಗಳು ಮುದ ನೀಡಲಿವೆ. ಬೆಂಗಳೂರು ಅರಮನೆ ಆಕೃತಿ ಗುಲಾಬಿ ಹೂವಿನಿಂದ ತಲೆ ಎತ್ತಲಿದೆ. ವಿವಿಧ ಬಣ ಗಳ ಲಕ್ಷಕ್ಕೂ ಅಧಿಕ ಗುಲಾಬಿ ಹೂವಿನಿಂದ ಈ ಆಕೃತಿಯನ್ನು ರಚಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಸೊಂಡಿಲೆತ್ತಿ ನಮಸ್ಕರಿಸುತ್ತಿರುವ 2 ಆನೆಗಳ ಮಾದರಿ, ವಾಯುಸೇನಾ, ಭೂಸೇನಾ ಹಾಗೂ ನೌಕಾಸೇನೆ ಗೌರವ ಸಲ್ಲಿಸುವಂತೆ ಮಾದರಿ ಚಿತ್ರಗಳನ್ನು ಪಿಂಗ್ ಪಾಂಗ್ ಹೂವುಗಳಿಂದ ಅಲಂಕರಿಸಲಾಗಿದೆ.

ಆಕರ್ಷಕ ಆಕೃತಿಗಳು

ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಉಪಗ್ರಹ ಉಡಾವಣೆಯ ಮಾದರಿ ಆಕೃತಿ, ಕಾಳಿಂಗ ಸರ್ಪದ ಆಕೃತಿ, ಧ್ಯಾನದ ಭಂಗಿಯಲ್ಲಿ ಕುಳಿತಿರುವ ಸ್ವಾಮಿ ವಿವೇಕಾನಂದರ ಚಿತ್ರವನ್ನು ನಿರ್ಮಿಸಿ ಹೂವು ಮತ್ತು ತರಕಾರಿಗಳಿಂದ ಸಿಂಗಾರ ಮಾಡಲಾಗಿದೆ. ಜಯ ಚಾಮ ರಾಜ ಒಡೆಯರ್ ಅವರು ಸಿಂಹಾಸನದ ಮೇಲೆ ಕುಳಿತಿರುವ ಆಕೃತಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮೀಜಿ ಆಕೃತಿ, ಅರಮನೆ ಖಾಸಗಿ ದರ್ಬಾರ್‌ನ ಆಕೃತಿಯುಳ್ಳ ಸೆಲ್ಫಿ ವಲಯವೂ ಇಲ್ಲಿದೆ.

ಮರಳುಗಾಡಿನ ಪ್ರಾಣಿಗಳು:

ರಾಷ್ಟ್ರಪಕ್ಷಿ ನವಿಲು ಮಾದರಿ ಚಿತ್ರ ಹಾಗೂ ಮನೆಯ ಅಂಗಳದ ರೀತಿಯ ಫೋಟೋ ವಲಯ, ಶಿವಲಿಂಗ ಮಾದರಿ ಚಿತ್ರವನ್ನು ನಿರ್ಮಿಸಿ ನಿಂಬೆಹಣ್ಣು ಮತ್ತು ಬಿಲ್ವೆ ಪತ್ರೆಗಳಿಂದ ಅಲಂಕರಿಸಲಾಗುತ್ತದೆ. ಚಾರಿಯೆಟ್ ಗಾಡಿಯ ಮಾದರಿ ಮತ್ತು ಒಂದು ಕುದುರೆ ಆಕೃತಿ, ಮಕ್ಕಳ ಉದ್ಯಾನದಲ್ಲಿ ಮರಳುಗಾಡಿನಲ್ಲಿ ವಾಸಿಸುವ ಪ್ರಾಣಿಗಳು ಮತ್ತು ಪಕ್ಷಿಗಳ 5 ಚಿತ್ರಗಳು ಚಿಣ್ಣರನ್ನು ಸ್ವಾಗತಿಸಲು ಸಜ್ಜಾಗಿವೆ.

ವರ್ಟಿಕಲ್ ಗಾರ್ಡನ್: ಪುಷ್ಪ ಪ್ರದರ್ಶನದಲ್ಲಿ ವರಾಹಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಂತೆ 27*13 ಅಡಿ ಅಳತೆಯಲ್ಲಿ 10,000 ಪಿಟೋನಿಯ ಹೂವಿನ ಗಿಡಗಳಿಂದ ನಿರ್ಮಿಸಿರುವ ವರ್ಟಿಕಲ್ ಗಾರ್ಡನ್ ಹೂವಿನ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ

ಸಾಂಸ್ಕೃತಿಕ ಕಾರ್ಯಕ್ರಮ:

ಫಲಪುಷ್ಪ ಪ್ರದರ್ಶನದ ಅಂಗವಾಗಿ ಅರಮನೆ ಆವರಣದಲ್ಲಿ ಡಿ.28ರಿಂದ 30ರವರೆಗೆ ನಿತ್ಯ ಸಂಜೆ 7ರಿಂದ ರಾತ್ರಿ 9ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. 31ರಂದು ರಾತ್ರಿ 11ರಿಂದ 12ರವರೆಗೆ ಪೊಲೀಸ್ ವಾದ್ಯ ತಂಡದಿಂದ ಕರ್ನಾಟಕ ಮತ್ತು ಆಂಗ್ಲ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ಜರುಗಲಿದೆ. ವರ್ಷಾಚರಣೆ ಪ್ರಯುಕ್ತ ರಾತ್ರಿ 12ರಿಂದ 12.15ರವರೆಗೆ ಶಬ್ದ ರಹಿತ ಪಟಾಕಿಗಳ ಪ್ರದರ್ಶನ ನಡೆಯಲಿದೆ.

ಅಲ್ಲದೆ, ಆಸಕ್ತರಿಗೆ ಪಕ್ಷಿ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.28 ಮತ್ತು 29ರಂದು ಕಾಮನಹುಂಡಿ ಕೆರೆ, ರಾಯನ ಕೆರೆ, ವರಕೋಡು ಅರಣ್ಯ, ಗಿರಿಬೆಟ್ಟದ ಕೆರೆ, ಹೆಬ್ಬಾಳ ಕೆರೆ ಮತ್ತು ತಿಪ್ಪಯ್ಯನ ಕೆರೆಯಲ್ಲಿ ಪಕ್ಷಿ ವೀಕ್ಷಣೆ ನಡೆಯಲಿದೆ.

Leave a Comment

Scroll to Top