ಮೈಸೂರಿನಲ್ಲಿ 150 ವರ್ಷಗಳ ಹಿಂದಿನ 2 ಬೃಹತ್ ನಂದಿ‌ ವಿಗ್ರಹಗಳು ಪತ್ತೆ..!

ಮೈಸೂರು: ಜಿಲ್ಲೆಯಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ 2 ಬೃಹತ್ ನಂದಿ‌ ವಿಗ್ರಹಗಳು ಪತ್ತೆಯಾಗಿದ್ದು ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಮಣ್ಣಿನಲ್ಲಿ ಹುದುಗಿದ್ದ ನಂದಿ ವಿಗ್ರಹಗಳನ್ನು ಮೇಲಕ್ಕೆ ತಂದಿದ್ದಾರೆ.

ಮೈಸೂರು ಜಿಲ್ಲೆಯ ಅರಸನಕೆರೆ ಗ್ರಾಮದಲ್ಲಿ ಬೃಹತ್ ನಂದಿ ವಿಗ್ರಹಗಳು ಸಿಕ್ಕಿವೆ. ಗ್ರಾಮದ ಜಮೀನಿನಲ್ಲಿ ಸುಮಾರು 12 ಅಡಿ ಮೀರಿದ ಎರಡು ನಂದಿ ವಿಗ್ರಹಗಳು ಪತ್ತೆಯಾಗಿವೆ. 15 ಅಡಿ ಮಣ್ಣಿನ ಆಳದಲ್ಲಿ ಮುಚ್ಚಿಹೋಗಿದ್ದ ಎರಡು ಬೃಹತ್ ನಂದಿ ವಿಗ್ರಹಗಳು ಸಿಕ್ಕಿವೆ. ಸುಮಾರು ನೂರೈವತ್ತು ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಅತ್ಯಂತ ದೊಡ್ಡದಾದ ನಂದಿ ವಿಗ್ರಹಗಳು ಇವು ಎಂದು ಹೇಳಲಾಗಿದೆ.

ಸುಮಾರು ನಲವತ್ತೈದು ವರ್ಷಗಳ ಹಿಂದಿಯೇ ಈ ವಿಗ್ರಹಗಳ ಕುರುಹು ಪತ್ತೆಯಾಗಿತ್ತು. ನಂದಿಯ ತಲೆ ಭಾಗ ಮಾತ್ರ ಪತ್ತೆಯಾಗಿತ್ತು. ಸದ್ಯ ಸಂಪೂರ್ಣ ವಿಗ್ರಹಗಳ ಉತ್ಖನನ ಕಾರ್ಯ ನಡೆದಿದೆ. ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಮಣ್ಣಿನಲ್ಲಿ ಹುದುಗಿದ್ದ ನಂದಿ ವಿಗ್ರಹಗಳನ್ನು ಮೇಲಕ್ಕೆ ತಂದಿದ್ದಾರೆ.

ವಿಗ್ರಹಕ್ಕೆ ನಲವತ್ತು ವರ್ಷದಿಂದ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾ ಬಂದಿದ್ದರು. ಅಲ್ಲದೇ ಇದರ ಜತೆಗೆ ಹದಿನೈದು ಬೇರೆ ಬೇರೆ ವಿಗ್ರಹಗಳು ಪತ್ತೆಯಾಗಿದ್ದು ಇತಿಹಾಸದ ಕತೆ ಹೇಳುತ್ತಿವೆ.

ಈ ಜಾಗಕ್ಕೆ ಮೈಸೂರು ಸಂಸ್ಥಾನದ ಮಹಾರಾಜ ಚಾಮರಾಜ ಒಡೆಯರ್ ಭೇಟಿ ನೀಡಿದ್ದರು. ಹಿಂದೆ ಚಾಮರಾಜ ಒಡೆಯರ್ ಸ್ವತಃ ವಿಗ್ರಹಗಳ ಮೇಲೆತ್ತಲು ಪ್ರಯತ್ನಿಸಿದ್ದ ಬಗ್ಗೆಯೂ ದಾಖಲೆಗಳಿವೆ. ಹಳ್ಳದಲ್ಲಿದ್ದ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಹೋಗುತ್ತಿದ್ದರು. ಈಗ ಗ್ರಾಮಸ್ಥರೇ ಮುಂದಾಗಿ ವಿಗ್ರಹ ಮೇಲೆತ್ತುವ ಮಾದರಿ ಕೆಲಸ ಮಾಡಿದ್ದಾರೆ.

Scroll to Top