ಮೈಸೂರು: ಸತ್ತ ನಾಯಿಗಳನ್ನು ತಿಂದ ಮೂರು ಚಿರತೆಗಳು ಮೃತಪಟ್ಟ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಹಿಂಬದಿಯಲ್ಲಿರುವ ಚೆನ್ನಬಸಪ್ಪ ಎಂಬವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ವಲಯದಿಂದ ಹಲ್ಲರೆ ಗ್ರಾಮದತ್ತ ಆಗಮಿಸಿರುವ ಸುಮಾರು 10 ವರ್ಷದ ಹೆಣ್ಣು ಚಿರತೆಯ ಜೊತೆಗೆ 8 ತಿಂಗಳ, 2 ಹೆಣ್ಣು ಚಿರತೆ ಮರಿಗಳು ಸಾವನ್ನಪ್ಪಿವೆ.
ಚಿರತೆ ಸತ್ತ ನಾಯಿಯನ್ನು ತಿಂದು ಸಾವನ್ನಪ್ಪಿದೆ. ನಾಯಿಗಳ ಹಾವಳಿ ತಪ್ಪಿಸಲು ಅವುಗಳಿಗೆ ವಿಷಾಹಾರ ಇಡಲಾಗಿದ್ದು, ಅದನ್ನು ತಿಂದು ನಾಯಿಗಳು ಸಾವನ್ನಪ್ಪಿದ್ದವು. ಈ ನಾಯಿಗಳನ್ನು ಚಿರತೆಗಳು ತಿಂದಿದ್ದು, ಅವುಗಳೂ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.