ನಾಡು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳು

ಮೈಸೂರು: ಜೂನ್ 4, 1884ರಲ್ಲಿ ಜನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದವರು.

ನಾವು ಯಾವ ಯಾವುದನ್ನು ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂತಹ ಮಹನೀಯರ ಶ್ರೇಷ್ಠ ಸೇವೆ ಎಂದು ಕೊಂಡಾಡುತ್ತೇವೆಯೋ ಆ ಹಿರಿಮೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ಕೂಡಾ ಮಹತ್ತರವಾದುದು. ಸರ್ವ ಕಾಲದಲ್ಲೂ ಪ್ರಾಜ್ಞರು ನಿಷ್ಠರು ಇದ್ದಿರುತ್ತಾರೆ. ಆ ಪ್ರಾಜ್ಞರಿಗೆ ಕಾರ್ಯದಕ್ಷತೆ ತೋರುವ ಅವಕಾಶ, ಸ್ವಾತಂತ್ರ್ಯ ಅಧಿಕಾರಗಳನ್ನು ನೀಡುವ ಮನೋಬಲ ರಾಜ್ಯಭಾರದವರಿಗೆ ಇದ್ದಾಗ ಮಾತ್ರವೇ ಅದು ಸಾಧ್ಯ ಎಂಬುದು ಅತ್ಯಂತ ಮುಖ್ಯ ಸಂಗತಿಯಲ್ಲವೆ..?

ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ 4, 1884 – ಆಗಸ್ಟ್ 3, 1940) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರು. ಇವರ ಆಳ್ವಿಕೆ 1902 ರಿಂದ 1940ರವರೆಗೆ ನಡೆಯಿತು.

ನಾಲ್ವಡಿ ಕೃಷ್ಣರಾಜ ಒಡೆಯರು 1895ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ 10 ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ , ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.

1902ರ ಆಗಸ್ಟ್ 8ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು. ಆಗ ದಿವಾನರಾಗಿದ್ದ ಸರ್. ಕೆ. ಶೇಷಾದ್ರಿ ಐಯರ್ ರವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮಖ ಅಭಿವೃದ್ದಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣ ಬದ್ದರಾದರು, ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ದಿಯನ್ನು ಮೈಸೂರು ರಾಜ್ಯವು ಕಂಡುದರಿಂದ ,ಮೈಸೂರು ಸಂಸ್ಥಾನಕ್ಕೆ ‘ ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಗಳು:

ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದರೆ, ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿ ಕೊಟ್ಟುದು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಲಾಯಿತು. ಇವರ ಕಾಲದಲ್ಲಿ

  • ಗ್ರಾಮ ನಿರ್ಮಲೀಕರಣ
  • ವೈದ್ಯ ಸಹಾಯ
  • ವಿದ್ಯಾ ಪ್ರಚಾರ
  • ನೀರಿನ ಸೌಕರ್ಯ
  • ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಮಾಡಳಿತ ಸಂಸ್ಥೆಗಳಾದವು .

ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನ ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು ’ ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿದ್ದಾರೆ. ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು 1905ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು.

  • ಹೊಸ ರೈಲು ದಾರಿಗಳ ನಿರ್ಮಾಣ:
  • ಮೈಸೂರು – ಅರಸೀಕೆರೆ,
  • ಬೆಂಗಳೂರು – ಚಿಕ್ಕಬಳ್ಳಾಪುರ,
  • ಚಿಕ್ಕಜಾಜೂರು – ಚಿತ್ರದುರ್ಗ,
  • ನಂಜನಗೂಡು – ಚಾಮರಾಜನಗರ,
  • ತರೀಕೆರೆ – ನರಸಿಂಹರಾಜಪುರ,
  • ಶಿವಮೊಗ್ಗ – ಆನಂದಪುರ ಈ ಎಲ್ಲ ರೈಲು ಮಾರ್ಗಗಳನ್ನು 1931ರ ವೇಳೆಗೆ ಪೂರೈಸಲಾಯಿತು .
ವಾಣೀವಿಲಾಸ ಸಾಗರ

ನೀರಾವರಿ:

  • 1907 ರಲ್ಲಿ ‘ವಾಣೀವಿಲಾಸ ಸಾಗರ’ (ಮಾರಿ ಕಣಿವೆ) ಕಟ್ಟಲ್ಪಟ್ಟಿತು.
  • 1911 ರಲ್ಲಿ ಆರಂಭವಾದ ‘ಕೃಷ್ಣರಾಜ ಸಾಗರ’ ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ. ಭಾರತದ, ಏಷ್ಯಾದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿರುವ ಕೃಷ್ಣರಾಜಸಾಗರ ನಿರ್ಮಾಣದ ಕೀರ್ತಿ ನಾಲ್ವಡಿಯರಿಗೆ ಸಲ್ಲುತ್ತದೆ. 1932ರಲ್ಲಿ ಅಣೆಕಟ್ಟು ನಿರ್ಮಾಣದ ಕಾರ್ಯ ಪುರ್ಣಗೊಂಡಿತು.
  • 1900ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು. ಇದು ಭಾರತದ ಮೊದಲ ಜಲ ವಿದ್ಯುತ್ ಕೇಂದ್ರ. ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರದು. ಇದರ ಫಲಿತಾಂಶವಾಗಿ 1905 ಆಗಸ್ಟ್ 3 ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು.

ಕೈಗಾರಿಕ ಅಭಿವೃದ್ದಿಗಳು

  1. 1914ರಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಸ್ಕೂಲನ್ನು ಆರಂಭಿಸಿದರು.
  2. ಭದ್ರಾವತಿಯ ಕಬ್ಬಿಣದ ಕಾರ್ಖಾನೆ
  3. ಬೆಂಗಳೂರಿನ ಸಾಬೂನು ಕಾರ್ಖಾನೆ
  4. ಮೈಸೂರಿನ ಗಂಧದೆಣ್ಣೆ ಕಾರ್ಖಾನೆ
  5. ಸಿಮೆಂಟ್ ಕಾರ್ಖಾನೆ
  6. 1934 – ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಂಪೆನಿ ಪ್ರಾರಂಭ
  7. 1936 – ಮೊಟ್ಟ ಮೊದಲ ಮೈಸೂರು ಪೇಪರ್ ಮಿಲ್ ಆರಂಭ
  8. ಮಂಗಳೂರು ಹೆಂಚು ಕಾರ್ಖಾನೆ
  9. ಷಹಬಾದಿನ ಸಿಮೆಂಟ್ ಕಾರ್ಖಾನೆ
  10. ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ
  11. ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳು ಪ್ರಾರಂಭಗೊಂಡವು

ವಿದ್ಯಾಭ್ಯಾಸ:

ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು, ಉಚಿತವಾಗಿ ಮತ್ತು ಕಡ್ಡಾಯವಾಗಿ ಆರಂಭಿಸಲಾಯಿತು .ನಾಲ್ವಡಿ ಕೃಷ್ಣರಾಜರ ಮಹತ್ತರ ಸಾಧನೆಯೆಂದರೆ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದುದು. ದೇಶದಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯವನ್ನು ಮೈಸೂರಿನಲ್ಲಿ ತೆರೆದು ದಾಖಲೆ ನಿರ್ಮಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು.

ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು. ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು. ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. 1906 ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ರೈತರಿಗಾಗಿ ಜಮೀನು ಅಡಮಾನ ಬ್ಯಾಂಕುಗಳು ಆರಂಭವಾದವು.

ಭದ್ರಾವತಿಯ ಕಬ್ಬಿಣದ ಕಾರ್ಖಾನೆ

ಜಾರಿ ಮಾಡಿದ ಸಾಮಾಜಿಕ ಕಾನೂನುಗಳು:

  • 1909ರಲ್ಲಿ ದೇವದಾಸಿ ಪದ್ಧತಿ ನಿಷೇಧ
  • 1910ರಲ್ಲಿ ಬಸವಿ ಪದ್ಧತಿ ರದ್ಧತಿ
  • 1910ರಲ್ಲಿ ’ಗೆಜ್ಜೆಪೂಜೆ’ ಪದ್ಧತಿ ಸಂಪೂರ್ಣ ನಿರ್ಮೂಲನೆ
  • 1936ಜುಲೈ ೧೪ ರಂದು ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆ ಜಾರಿ
  • 1936ಜುಲೈ ೭ ರಂದು ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆಯ ಜಾರಿ
  • 1936ಜುಲೈ ೭ ರಂದು ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ
  • 1914ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ
  • 1919ರಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ
  • 1927ರಲ್ಲಿ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಮೊಟ್ಟಮೊದಲ ಬಾರಿಗೆ ಕಲ್ಪಿಸಿಕೊಟ್ಟರು
  • 1905ರಲ್ಲಿ ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದರು
  • 1913ರಲ್ಲಿ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿ ಮಾಡಿದರು
  • 1918ರಲ್ಲಿ ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ಜಾರಿಗೆ ತಂದರು

ಮಾದರಿ ಮೈಸೂರು:

1902ರ ಆಗಸ್ಟ್ ೮ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು. ಆಗ ದಿವಾನರಾಗಿದ್ದ ಸರ್. ಕೆ. ಶೇಷಾದ್ರಿ ಐಯ್ಯರ್ ರವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮಖ ಅಭಿವೃದ್ದಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣ ಬದ್ದರಾದರು. ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ದಿಯನ್ನು ಮೈಸೂರು ರಾಜ್ಯವು ಕಂಡುದರಿಂದ, ಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು. ನಾಲ್ವಡಿ ಕೃಷ್ಣರಾಜ ಒಡೆಯ ರು ಅರಸು ಮನೆತನದಿಂದ ಬಂದವರಾಗಿದ್ದರೂ ಸಹ, ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯ ಪರವಾಗಿದ್ದರು.

ಪ್ರಜಾ ಪ್ರತಿನಿಧಿ ಸಭೆ:

ಆದುದರಿಂದ ಅವರ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ ‘ಪ್ರಜಾ ಪ್ರತಿನಿಧಿ ಸಭೆ’ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು. ಅದಕ್ಕಾಗಿ ೧೯೨೩ರರಲ್ಲಿ ಹೊಸ ಕಾನೂನೊಂದನ್ನು ಜಾರಿಗೆ ತಂದು, ಪ್ರಜಾ ಪ್ರತಿನಿಧಿ ಸಭೆಯನ್ನು ಶಾಸನಬದ್ದ ಸಂಸ್ಥೆಯನ್ನಾಗಿ ಮಾರ್ಪಡಿಸಿದರು. ಇದು [ಪ್ರಜಾತಂತ್ರದ ದೃಷ್ಟಿಯಿಂದ] ಭಾರತದಲ್ಲಿಯೇ ಮಾದರಿಯಾದ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿತು. ಪ್ರಜಾ ಪ್ರತಿನಿಧಿ ಸಭೆಯು ವರ್ಷಕ್ಕೆ ಎರಡು ಬಾರಿ (1 ಜೂನ್ – ಮಹಾರಾಜರ ವರ್ಧಂತಿ , 2 ಅಕ್ಟೋಬರ್ – ದಸರಾ ಮಹೋತ್ಸವ ) ಸಮಾವೇಶಗೊಂಡು ಕಲಾಪಗಳನ್ನು ನಡೆಸುತ್ತಿತ್ತು ಅಲ್ಲಿ ವಾರ್ಷಿಕ ಆಯ ವ್ಯಯ ಪರಿಶೀಲನೆ, ಪ್ರಶ್ನೋತ್ತರಗಳು, ಠರಾವುಗಳನ್ನು ಮಂಡಿಸುವುದು ಮುಂತಾದ ಸಂಸದೀಯ ಮಾದರಿಯ ನಡವಳಿಕೆಗಳು ನಡೆಯುತ್ತಿದ್ದವು. ಪ್ರತಿನಿಧಿ ಸಭೆಯಲ್ಲಿದ್ದ 275 ಸದಸ್ಯರಲ್ಲಿ ಹೆಚ್ಚು ಪ್ರತಿನಿಧಿಗಳು ಜನರಿಂದ ಆಯ್ಕೆಯಾದವರಾಗಿದ್ದರು.

ನ್ಯಾಯ ವಿಧಾಯಕ ಸಭೆ:

ಇದರ ಜೊತೆಗೆ 1907ರಲ್ಲಿ ‘ನ್ಯಾಯ ವಿಧಾಯಕ’ ಸಭೆಯನ್ನೂ ಸಹ ಸ್ಥಾಪಿಸಲಾಯಿತು. ಇದರ ಸದಸ್ಯರ ಸಂಖ್ಯೆ 50. ಇದರಲ್ಲಿ ಜನರಿಂದ ಆಯ್ಕೆಯಾದವರು 22 ಸದಸ್ಯರು. ಮೇಲ್ಮನೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆ, ಜೂನ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಸಮಾವೇಶಗೊಳ್ಳುತ್ತಿತ್ತು. ಪ್ರಜಾ ಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲ ವಿಷಯಗಳನ್ನೂ ಸಹ ವಿಮರ್ಶಿಸುವ ಅಧಿಕಾರ ಆ ಸಭೆಗೆ ಇದ್ದಿತು. ಮುಖ್ಯವಾಗಿ ಯಾವುದೇ ಕಾನೂನನ್ನು ಜಾರಿಗೊಳಿಸಲು ಆ ಸಭೆಯ ಅನುಮತಿ ಅಗತ್ಯವಾಗಿತ್ತು .ಆ ಸಭೆಗೆ ಸರ್ಕಾರದ ಖರ್ಚು ಗಳನ್ನು ಕಡಿಮೆ ಮಾಡುವ ಅಧಿಕಾರ ಸಹ ಇದ್ದಿತು.

ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನ ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು ’ ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿದ್ದಾರೆ. ಗಾಂಧೀಜಿಯವರಿಂದಲೇ ‘ರಾಜರ್ಷಿ’ ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಂಸೆ ಪಡೆದಿದ್ದರು.

Scroll to Top