ಮೈಸೂರು: ಉದ್ಯಮದ ಜೊತೆ ಜೊತೆಯಲ್ಲೇ ಸದಾ ಒಂದಿಲ್ಲೊಂದು ಮಾನವೀಯ ಕಾರ್ಯಗಳಿಂದ ಗುರುತಿಸಿಕೊಳ್ಳುವ ಮಹೀಂದ್ರಾ ಕಂಪನಿಯ ಮುಖ್ಯಸ್ಥ, ಉದ್ಯಮಿ ಆನಂದ್ ಮಹೀಂದ್ರಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ತನ್ನ ವೃದ್ಧ ತಾಯಿಯನ್ನು ಹಳೆ ಸ್ಕೂಟರಿನಲ್ಲಿ ಕುಳ್ಳರಿಸಿಕೊಂಡು ದೇಶದ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆ ಮಾಡಿಸುತ್ತಿರುವ ಮೈಸೂರಿನ ನಿವಾಸಿಗೆ ಆನಂದ್ ಮಹೀಂದ್ರಾ ಅವರು ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ಕೃಷ್ಣ ಕುಮಾರ್ ಹಾಗೂ ಅವರ ತಾಯಿ ರತ್ನಮ್ಮ ಅವರ ತೀರ್ಥಯಾತ್ರೆಯ ಕಥೆಯನ್ನು ಕೇಳಿದ ಆನಂದ್ ಮಹೀಂದ್ರಾ ಅವರು, ಅಮ್ಮ-ಮಗನಿಗೆ ಕೆಯುವಿ 100 ಎನ್‍ಎಕ್ಸ್ಟಿ ಕಾರನ್ನು ಗಿಫ್ಟ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಅಮ್ಮ ಮಗನ ಯಾತ್ರೆಯ ಬಗ್ಗೆ ಟ್ವಿಟ್ ಮಾಡಿದ ಮನೋಜ್ ಅವರಿಗೆ ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿದ ಮಹೀಂದ್ರಾ ಅವರು, “ಇದೊಂದು ಸುಂದರವಾದ ಕಥೆ. ತಾಯಿಗಾಗಿನ ಪ್ರೀತಿ ಮಾತ್ರವಲ್ಲ, ದೇಶದ ಬಗೆಗಿನ ಪ್ರೀತಿಯನ್ನೂ ಇದು ಒಳಗೊಂಡಿದೆ. ಈ ಕಥೆಯನ್ನು ಹಂಚಿಕೊಂಡ ಮನೋಜ್ ಅವರಿಗೆ ಧನ್ಯವಾದಗಳು. ನೀವು ನನ್ನನ್ನು ಅವರಿಗೆ ಸಂಪರ್ಕಿಸಿದರೆ, ನಾನು ಮಹೀಂದ್ರ ಕೆಯುವಿ 100 ಎನ್ ಎಕ್ಸ್ ಟಿ ಕಾರ್ ಅನ್ನು ಅವರಿಗೆ ಉಡುಗೊರೆ ನೀಡಲು ಬಯಸುವೆ. ಇದರಿಂದ ಅವರು ಕಾರಿನ ಮೂಲಕವೇ ತಮ್ಮ ತಾಯಿಯನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗಬಹುದು” ಎಂದಿದ್ದಾರೆ.
ಯಾರಿದು ಕಲಿಯುಗದ ಶ್ರವಣಕುಮಾರ..?
ಮೂಲತಃ ಮೈಸೂರಿನವರಾಗಿದ್ದು, ಅವರ ತಂದೆ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಒಂದು ದಿನ ರತ್ಮಮ್ಮನವರು, ನಿಮ್ಮ ತಂದೆ ಕೊನೆಗೂ ನನಗೆ ವೆಲ್ಲೂರು ದೇವಸ್ಥಾನ ತೋರಿಸಲಿಲ್ಲ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಬಿಟ್ಟರು ಎಂದು ನೋವು ತೋಡಿಕೊಂಡಿದ್ದರು. ಅಂದು ಕೃಷ್ಣ ಕುಮಾರ್, ಕೇವಲ ವೆಲ್ಲೂರು ಏಕೆ, ದೇಶದ ನಾಲ್ಕು ದಿಕ್ಕಿನಲ್ಲಿರುವ ಕ್ಷೇತ್ರಗಳ ದರ್ಶನ ಮಾಡಿಸುತ್ತೇನೆ ಎಂದು ತೀರ್ಥಯಾತ್ರೆ ಆರಂಭಿಸಿದ್ದಾರೆ.