ಜನವರಿ 12 ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ಜನವರಿ 12 ರಿಂದ 18 ರವರೆಗೆ ರಂಗಾಯಣದಲ್ಲಿ ನಡೆಯಲಿದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿರಾಂ  ಜಿ ಶಂಕರ್ ಅವರು ತಿಳಿಸಿದರು.

ಅವರು ರಂಗಾಯಣದ ಕುಟೀರದಲ್ಲಿ ಆಯೋಜಿಸಲಾಗಿದ್ದ, ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ದಲ್ಲಿ ಬೇರೆ ರಾಜ್ಯಗಳ 9 ಭಾಷೆಯ ನಾಟಕಗಳನ್ನು ಹಾಗೂ ನಾಟಕೋತ್ಸವ ನಡೆಯುವ 2 ದಿನಕ್ಕೊಮ್ಮೆ  ಶ್ರೀ ರಾಮಯಣ ದರ್ಶನಂ ನಾಟಕ ಕೂಡ ಪ್ರದರ್ಶಿಸಲಾಗುವುದು. ನಾಟಕ ಕಾರ್ಯಕ್ರಮಗಳು ರಂಗಾಯಣ ಹಾಗೂ ಕಲಾಮಂದಿರದಲ್ಲಿ ನಡೆಯಲಿದೆ ಎಂದರು.

ಬೇರೆ ರಾಜ್ಯಗಳಿಂದ ಕಲಾವಿದರು ಆಗಮಿಸುತ್ತಿದ್ದು, ಇವರಿಗೆ ಬೇಕಿರುವ ವಸತಿ ಹಾಗೂ ವಸತಿಯ ಸ್ಥಳದಿಂದ ಸಾರಿಗೆ ವ್ಯವಸ್ಥೆ ಮಾಡಬೇಕಿದ್ದು, ಲೋಕೋಪಯೋಗಿ ಇಲಾಖೆ, ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಅತಿಥಿಗೃಹಗಳನ್ನು ಕಾಯ್ದಿರಿಸಲು ಪತ್ರ ಬರೆಯುವಂತೆ ತಿಳಿಸಿದರು.

ಬಹುರೂಪಿ ನಾಟಕೋತ್ಸವ ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಸರ್ಕಾರಿ ರಜೆ ಇದ್ದು, ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ಆಗಮಿಸುವ ನಿರೀಕ್ಷೆ ಇದೆ. ಹೊಟೇಲ್ ಅಸೋಸಿಯೇಷನ್ ಹಾಗೂ ಪ್ರವಾಸೋದ್ಯಮ ಇಲಾಖೆಯೊಂದಿಗೆ ಪ್ರಚಾರ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.

ನಾಟಕೋತ್ಸವ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನೀರಿನ ಟ್ಯಾಂಕರ್, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ಸ್ವಚ್ಚತಾ ವ್ಯವಸ್ಥೆ, ಪ್ರತಿ ದಿನ ಸೊಳ್ಳೆ ನಿಯಂತ್ರಣ ಔಷಧಿ ಸಿಂಪಡಿಸುವಂತೆ ತಿಳಿಸಿದರು. 

ರಂಗಾಯಣದ ಹೊರ ಆವರಣದಲ್ಲಿ ಕುಕ್ಕರಳ್ಳಿ ಕೆರೆ ಇದ್ದು, ಈ ಭಾಗದಲ್ಲಿ ಕಸ ವಿಲೇವಾರಿ ಮಾಡದಂತೆ ನೋಡಿಕೊಳ್ಳುವಂತೆ ರಂಗಾಯಣದವರು ನೋಡಿಕೊಳ್ಳಬೇಕು. ನಿರಂತರವಾಗಿ ವಿದ್ಯುತ್ ವ್ಯವಸ್ಥೆ ಒದಗಿಸುವಂತೆ  ಚೆಸ್ಕಾಂ ಇಲಾಖೆ ಅವರಿಗೆ ತಿಳಿಸಿದರು.

ಸಭೆಯಲ್ಲಿ ರಂಗಾಯಣದ ನಿರ್ದೇಶಕರರಾದ ಭಾಗೀರಥಿ ಬಾಯಿ ಕದಂ, ಮೈಸೂರು ಮಹಾನಗರಪಾಲಿಕೆ ಆಯುಕ್ತ ಜಗದೀಶ್, ರಂಗಾಯಣದ  ಜಂಟಿ ನಿರ್ದೇಶಕ ಮಲ್ಲಿಕಾರ್ಜುನ್ ಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Scroll to Top