ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ಇಂದು ಆನೆ ಮತ್ತು ಕುದುರೆಗಳಿಗೆ ಸಿಡಿಮದ್ದಿನ ತಾಲೀಮು ನೀಡಲಾಯ್ತು. ಅರಮನೆ ಆವರಣದ ಪಾರ್ಕಿಂಗ್ ಸ್ಥಳದಲ್ಲಿ, ರಾಜ್ಯ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅವರ ನೇತೃತ್ವದಲ್ಲಿ ತಾಲೀಮನ್ನ ನಡೆಸಲಾಯಿತು.
ಮೊದಲ ಹಂತದ ಸಿಡಿ ಮದ್ದು ತಾಲೀಮು ಇದಾಗಿದ್ದು, 6 ಪಿರಂಗಿ ಬಳಕೆ ಮಾಡಲಾಗಿತ್ತು. 11 ಆನೆ, 25 ಕುದುರೆಗಳು ಭಾಗುಯಾಗಿದ್ದವು. ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ವಿಜಯಾ, ಧನಂಜಯ, ಗೋಪಿ, ದುರ್ಗಾಪರಮೇಶ್ವರಿ, ಜಯಪ್ರಕಾಶ್, ಲಕ್ಷ್ಮೀ, ಬಲರಾಮ, ಕಾವೇರಿ, ವಿಕ್ರಮ, ಈಶ್ವರ ಆನೆಗಳು ತಾಲೀಮಿನಲ್ಲಿಹಾಜರಿದ್ದವು. ಅಲ್ಲದೆ ಗರ್ಭಿಣಿಯಾಗಿರುವ ವರಲಕ್ಷ್ಮೀ ಗೆ ತಾಲೀಮಿನಿಂದ ವಿನಾಯಿತಿ ನೀಡಲಾಗಿತ್ತು. ಜೊತೆಗೆ ಹುಲಿ ಕಾರ್ಯಾಚರಣೆಗೆ ಆನೆ ಅಭಿಮನ್ಯು ಹೋಗಿರುವುದರಿಂದ ತಾಲೀಮಿನಲ್ಲಿ ಆತನೂ ಭಾಗಿಯಾಗಿರಲಿಲ್ಲ.
ವಿಜಯ ದಶಮಿಯಂದು ದೇವಿಗೆ ಪುಷ್ಪಾರ್ಚನೆ ಮಾಡಿದ ನಂತರ ಕುಶಾಲತೋಪನ್ನ ವಿಜಯೋತ್ಸವದ ಸಂಕೇತವಾಗಿ ಹಾರಿಸಲಾಗುತ್ತದೆ. ಆ ಸಂದರ್ಭದಲ್ಲಿ ಆನೆಗಳು ಭಯಪಡಬಾರದೆಂದು ಸಿಡಿ ಮದ್ದು ತಾಲೀಮುನ್ನ ನೀಡಲಾಗುತ್ತದೆ. ಒಂದೆಡೆ ಸಿಡಿ ಮದ್ದಿನ ಸದ್ದು ಕಿವಿಗಪ್ಪಳಿಸುತ್ತಿದ್ದರೆ ಅರ್ಜುನ ಬಲರಾಮ ಆನೆಗಳು ಅಲ್ಪವೂ ಅಲುಗಾಡದೆ ನಿಂತಿದ್ದವು.