ಮೈಸೂರು: ಫೋನಿ ಚಂಡಮಾರುತದಿಂದ ತತ್ತರಿಸಿರುವ ಸಂತ್ರಸ್ತರಿಗೆ 25ಟನ್ ತೂಕ್ 1 ಲಕ್ಷ ಆಹಾರ ಪೊಟ್ಟಣಗಳನ್ನು ಪೂರೈಕೆ ಮಾಡಲು ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಮುಂದಾಗಿದ್ದು, ಮೊದಲ ಹಂತದಲ್ಲಿ ಇಂದು(ಮೇ 6) 5 ಟನ್ ಆಹಾರವನ್ನು ಒಡಿಶಾಗೆ ಸರಬರಾಜು ಮಾಡಲಾಗುತ್ತಿದೆ.
ಶುಕ್ರವಾರ ಸಂಜೆಯಿಂದಲೇ ಸಂಸ್ಥೆಯಲ್ಲಿ ಆಹಾರ ತಯಾರಿ ಶುರುವಾಗಿದ್ದು, ಭಾನುವಾರ ಬೆಳಿಗ್ಗೆ 5 ಟನ್ ತೂಕದ ಆಹಾರ ಪೊಟ್ಟಣಗಳು ಸಿದ್ಧವಿದ್ದವು. ಸೋಮವಾರ ಬೆಳಿಗ್ಗೆಯೊಳಗೆ ಒಟ್ಟು 25 ಸಾವಿರ ಟನ್ ತೂಕದ ಆಹಾರ ಪೊಟ್ಟಣಗಳನ್ನು ತಯಾರಿಸಿ ವಿಮಾನದ ಮೂಲಕ ಒಡಿಶಾಗೆ ಕಳುಹಿಸಲು ಸಂಸ್ಥೆ ಸಕಲ ಸಿದ್ಧತೆ ನಡೆಸಿದೆ.
ಏನೇನು ಆಹಾರ..?
ಗೊಜ್ಜು ಅವಲಕ್ಕಿ (ಇಮ್ಲೀ ಪೋಹ), ಉಪ್ಪಿಟ್ಟು (ರೆಡಿ ಟು ಈಟ್), ಉಪ್ಪಿಟ್ಟು (ರೆಡಿ ಟು ಕುಕ್), ಚಪಾತಿ, ಟೊಮೆಟೊ ಚಟ್ನಿ, ಹೈ ಪ್ರೋಟೀನ್ ರಸ್ಕ್ ಮತ್ತು ಬಿಸ್ಕತ್ ತಯಾರಾಗುತ್ತಿವೆ.
200 ಸಿಬ್ಬಂದಿ, 200 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 800 ಮಂದಿ ಹಗಲಿರುಳು ಆಹಾರ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಜತೆಗೆ, ಸರ್ಕಾರಿ ರೈಲ್ವೆ ಪೊಲೀಸರು ಸಹ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಕಾರ್ಯಾಚರಣೆ ಚುರುಕುಕೊಂಡಿದೆ. ಸಂಸ್ಥೆಯ ಕುಟುಂಬ ಸದಸ್ಯರೂ ಭಾಗಿಯಾಗಿದ್ದಾರೆ.