ಚೆನ್ನೈ: ಬೆಂಗಳೂರು ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ಸಂಚರಿಸುವ ದಕ್ಷಿಣ ಭಾರತದ ಮೊತ್ತ ಮೊದಲ ಶತಾಬ್ದಿ ಎಕ್ಸ್‌ಪ್ರೆಸ್ ಇಂದಿಗೆ 25 ವರ್ಷಗಳನ್ನು ಪೂರೈಸಿದೆ.
ತಮಿಳುನಾಡು ರಾಜಧಾನಿಯಿಂದ ಕರ್ನಾಟಕ ರಾಜಧಾನಿಗೆ ಬೆಳಗ್ಗೆ ಆಗಮಿಸಲು ಬಯಸುವ ಬಹುತೇಕ ಮಂದಿ ಇದೇ ರೈಲನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
1994ರ ಮೇ 11ರಂದು ಈ ರೈಲಿನ ಸಂಚಾರವನ್ನು ಆರಂಭಿಸಲಾಗಿತ್ತು, ಈಗಲೂ ಇದು ಪ್ರಯಾಣಿಕರ ನೆಚ್ಚಿನ ರೈಲಾಗಿದೆ. ಅದರಲ್ಲೂ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿ, ಅದೇ ದಿನ ರಾತ್ರಿ ಚೆನ್ನೈಗೆ ತೆರಳುವವರಿಗೆ ಈ ರೈಲು ಹೆಚ್ಚು ಪ್ರಯೋಜನಕಾರಿಯಾಗಿದೆ.
ಚೆನ್ನೈನಿಂದ ಬೆಂಗಳೂರಿಗೆ ಪ್ರಯಾಣಿಸಲು ಈ ರೈಲು ನಾಲ್ಕೂವರೆ ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಮೈಸೂರಿಗೆ ಆಗಮಿಸಲು 7 ಗಂಟೆಯನ್ನು ತೆಗೆದುಕೊಳ್ಳುತ್ತದೆ.
1994ರಲ್ಲಿ 10 ಕೋಚುಗಳನ್ನು ಹೊಂದಿದ್ದ ಈ ರೈಲು ಈಗ 16 ಕೋಚುಗಳನ್ನು ಹೊಂದಿದೆ. ಒಂದು ಅನುಭೂತಿ ಮತ್ತು ಒಂದು ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್ ಇದೆ.
ಚೆನ್ನೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಲು ಮತ್ತು ಅದಕ್ಕೆ ತಗಲುವ ಪ್ರಕ್ರಿಯೆಯ ಸಮಯವನ್ನು ಲೆಕ್ಕ ಹಾಕಿದರೆ, ಶತಾಬ್ದಿ ರೈಲು ಒಂದು ಗಂಟೆ ಮುಂಚಿತವಾಗಿಯೇ ಬೆಂಗಳೂರನ್ನು ತಲುಪುತ್ತದೆ.