ಮೈಸೂರು: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ದೊಡ್ಡ ಗಡಿಯಾರ ದ ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ.
ಗೋಪುರದ ಮೇಲಿನ ಒಳಭಾಗದಲ್ಲಿ ಬಿರುಕುಗಳು ಮೂಡಿವೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಗೋಪುರ ಶಿಥಿಲವಾಗುವ ಸಾಧ್ಯತೆ ಇದೆ.
ಈ ಗಡಿಯಾರಕ್ಕೆ ಅಳವಡಿಸಿದ್ದ 5.5 ಅಡಿ ಎತ್ತರದ ಬೃಹತ್ ಕಂಚಿನ ಘಂಟೆಯಿಂದ ಹೊರಹೊಮ್ಮುತ್ತಿದ್ದ ಶಬ್ದದಿಂದ ಬಿರುಕು ಕಾಣಿಸುತ್ತಿರಬಹುದೆಂದು 30 ವರ್ಷದ ಹಿಂದೆಯೇ ಗಂಟೆ ಶಬ್ದವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇಂದು ಬಿರುಕುಗಳು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಪ್ರತಿಕ್ರಿಯೆ ನೀಡಿದ್ದು. ನಗರದ ಹೃದಯ ಭಾಗದಲ್ಲಿರುವ ದೊಡ್ಡ ಗಡಿಯಾರ ಈ ಹಿಂದೆ 1 ಗಂಟೆಗೊಮ್ಮೆ ಶಬ್ದ ಮಾಡುತ್ತಿತ್ತೋ ಹಾಗೆಯೇ ಸರಿಪಡಿಸಬೇಕೆಂದು ಪಾಲಿಕೆ ಆಯುಕ್ತರು ಹೇಳುತ್ತಿದ್ದರು. ಅದರಂತೆ ಆಯುಕ್ತರು, ಇಂಜಿನಿಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಗೋಪುರ ಬಿರುಕು ಬಿಟ್ಟಿರುವುದು ಗೊತ್ತಾಗಿದೆ. ಇದು ಯಾವ ಕಾರಣಕ್ಕೆ ಬಿಟ್ಟಿತೆಂದು ಗೊತ್ತಾಗಿಲ್ಲ. ಈ ವಾರದಲ್ಲಿ ತಜ್ಞರ ಸಮಿತಿ ಸಭೆ ಕರೆದು ಚರ್ಚಿಸಿ, ಸಲಹೆ ಪಡೆಯಲಾಗುವುದು ಎಂದರು.
ದೊಡ್ಡ ಗಡಿಯಾರವನ್ನು ಮೊದಲಿ ನಂತೆ ಸರಿಪಡಿಸುವಂತೆ ಸಾರ್ವಜನಿಕರು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಪ್ರಯತ್ನ ಮಾಡುತ್ತೇವೆ. ಜತೆಗೆ ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿ ಸದಸ್ಯ ಡಾ.ಎನ್.ಎಸ್.ರಂಗ ರಾಜು ಅವರು ಯಾವುದೋ ತಂತ್ರಜ್ಞಾನ ಬಳಸಿದರೆ ಸರಿಪಡಿಸಬಹುದೆಂದು ತಿಳಿಸಿದ್ದಾರೆ. ಅವರ ಸಲಹೆ-ಸೂಚನೆಗಳ ಮೇರೆಗೆ ನಗರಪಾಲಿಕೆ ಮತ್ತು ಪಾರಂಪರಿಕ ಇಲಾಖೆ ವತಿಯಿಂದ ಕಾಮಗಾರಿ ಆರಂಭಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.