ಮೈಸೂರು: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನಿಧನದ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಇರುವುದರಿಂದ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ಅರಮನೆ ಮಂಡಳಿಯ ಉಪನಿರ್ದೇಶಕರು ತಿಳಿಸಿದ್ದಾರೆ.
ದಿನಾಂಕ: 29-12-2019 ರಿಂದ 31-12-2019 ರವರೆಗೆ ಸಂಜೆ 7 ರಿಂದ 9 ಗಂಟೆಯವರೆಗೆ ನಡೆಯಬೇಕಾಗಿದ್ದ ಸಾಂಸ್ಕøತಿಕ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಈ ದಿನಗಳಂದು ಅರಮನೆಯ ದೀಪಾಲಂಕಾರ ವ್ಯವಸ್ಥೆ ಇರುವುದಿಲ್ಲ. ಆದರೆ ಅರಮನೆಯು ಎಂದಿನಂತೆ ಪ್ರವಾಸಿಗರಿಗೆ ಬೆಳಿಗ್ಗೆ 10 ರಿಂದ ಸಂಜೆ 5-30 ರವರೆಗೆ ತೆರೆದಿರುತ್ತದೆ. ಪ್ರವಾಸಿಗರು / ಸಾರ್ವಜನಿಕರು ಬೆಳಿಗ್ಗೆ 10 ರಿಂದ ರಾತ್ರಿ 8-30 ರವರೆಗೆ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಬಹುದಾಗಿರುತ್ತದೆ.
ಮುಂದೂಡಲ್ಪಟ್ಟ ಕಾರ್ಯಕ್ರಮಗಳನ್ನು ಜನವರಿ 1 ಮತ್ತು 2 ರಂದು ನಿಗದಿಪಡಿಸಲಾಗಿದೆ. ಜನವರಿ 1 ರಂದು ಸಂಜೆ 6 ರಿಂದ 7 ಗಂಟೆಯವರೆಗೆ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ, ಸಂಜೆ 7 ರಿಂದ 9 ಗಂಟೆಯವರೆಗೆ ಸುನಿತಾ ಚಂದ್ರಕುಮಾರ್ ನೇತೃತ್ವದಲ್ಲಿ ಶ್ರೀ ರಘುಲೀಲ ಸಂಗೀತ ಮಂದಿರ ತಂಡದ 110 ಮಂದಿಯಿಂದ ಶ್ರೀ ಶ್ರೀನಿವಾಸ ಕಲ್ಯಾಣ “ನೃತ್ಯ ವೈಭವ” ಕಾರ್ಯಕ್ರಮವನ್ನು ಹಾಗೂ ರಾತ್ರಿ 9 ರಿಂದ 9-30 ಗಂಟೆಯವರೆಗೆ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಶಬ್ದ ರಹಿತ ಪಟಾಕಿ ಸಿಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜನವರಿ 2 ರಂದು ಸಂಜೆ 7 ರಿಂದ 9 ಗಂಟೆಯವರೆಗೆ ಶ್ರೀ ಹರ್ಷ ಹಾಗೂ ಸರಿಗಮಪ ಮತ್ತು ಕನ್ನಡ ಕೋಗಿಲೆ ತಂಡದವರಿಂದ ಹರ್ಷಧ್ವನಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.