ಮೈಸೂರು: ಸೈಬರ್ ಕ್ರೈಂಗೆ ಸಂಬಂಧಿಸಿದ ಪ್ರಕರಣಗಳನ್ನ ಇನ್ಮುಂದೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲೆ ದಾಖಲಿಸಬಹುದು ಎಂದು ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜನರು ಹಣ ಉಳಿತಾಯ, ವಿವಿಧ ಉಡುಗೊರೆ, ಉಚಿತ ಹಣ ಸೇರಿದಂತೆ ಇನ್ನೀತರ ಆಮೀಷಗಳಿಗೆ ಒಳಗಾಗಿ ಲಕ್ಷಾಂತರ ರೂಪಾಯಿಗಳನ್ನು ಆನ್ಲೈನ್ನಲ್ಲಿ ಕಳೆದುಕೊಳ್ಳುತ್ತಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರೆ ಪೊಲೀಸರು ಇದು ನಮ್ಮ ವ್ಯಾಪ್ತಿಗೆ ಬರಲ್ಲ ಅಂತ ಸಬೂಬು ಹೇಳಿ ಜಾರಿಕೊಳ್ತಿದ್ದರು. ಪರಿಣಾಮ ಮೋಸ ಗೊಳಗಾದವರು ದೂರು ಎಲ್ಲಿ ದಾಖಲಿಸಬೇಕೆಂದು ತಿಳಿಯದೇ ಕಂಗಾಲಾಗುತ್ತಿದ್ದರು. ಇನ್ನು ತಿಳಿದವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ರೆ ಅಲ್ಲಿ ಸಿಬ್ಬಂದಿ ಕೊರತೆಯಿಂದ ದೂರುಗಳು ಮೂಲೆ ಸೇರುತ್ತಿದ್ದವು.
ಇದನ್ನೆಲ್ಲಾ ಗಣನೆಗೆ ತೆಗೆದುಕೊಂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಅದರಂತೆ ಇನ್ಮುಂದೆ ಸೈಬರ್ ಕ್ರೈಂ ಪ್ರಕರಣಗಳನ್ನ ಸ್ಥಳೀಯ ಠಾಣೆಗಳಲ್ಲಿ ದಾಖಲಿಸಬಹುದು.
ಹೌದು. ಬ್ಯಾಂಕ್ನಿಂದ ಹಣ ಕಳ್ಳತನ, ಸಿಮ್ ಸ್ವ್ಯಾಪಿಂಗ್, ಅಶ್ಲೀಲ ಮೆಸೇಜ್ ರವಾನೆ, ಸೈಬರ್ ಭಯೋತ್ಪಾದನೆ, ಡೇಟಾ ಡೆಡ್ಲಿಂಗ್, ವೈರಸ್ ಅಟ್ಯಾಕ್, ಈ ಮೇಲ್ ಹ್ಯಾಕ್, ಓಟಿಪಿ ಚೀಟಿಂಗ್ ಸೇರಿದಂತೆ ಮೊದಲಾದ ಆನ್ಲೈನ್ ಸಂಬಂಧಿ ದೂರುಗಳನ್ನು ಸ್ಥಳೀಯ ಠಾಣೆಗಳಲ್ಲಿ ದಾಖಲಿಸಬಹುದು. ಅಲ್ಲದೇ ಸ್ಥಳೀಯ ಪೊಲೀಸ್ ಠಾಣೆಗಳು ಪ್ರಕರಣಗಳನ್ನ ತೆಗೆದುಕೊಳ್ಳುವುದಿಲ್ಲ ಅನ್ನೋ ಹಾಗಿಲ್ಲ ಅಂತ ಸರ್ಕಾರ ಆದೇಶದಲ್ಲಿ ತಿಳಿಸಿದೆ.