ಮೈಸೂರು: ಆಧುನಿಕತೆ ಬೆಳೆದಂತೆಲ್ಲ ಮೂಲೆ ಗುಂಪಾಗಿದ್ದ ಬಡವರ ಫ್ರಿಡ್ಜ್ ಗೆ ಮೈಸೂರಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಕಡು ಬಡವರಿಂದ ಹಿಡಿದು ಶ್ರೀಮಂತರವರೆಗೂ ಫ್ರಿಡ್ಜ್ ಕೊಳ್ಳುವುದರಲ್ಲಿ ಬ್ಯೂಸಿ ಆಗಿದ್ದಾರೆ.
ಬೇಸಿಗೆಯ ಬಿಸಿಲ ತಾಪ ದಿನೇ ದಿನೇ ಹೆಚ್ಚುತ್ತಿದಂತೆಯೇ, ‘ಬಡವರ ಫ್ರಿಡ್ಜ್ ‘ ಎಂದೇ ಕರೆಯಲಾಗುವ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಬಂದಿದೆ.
ಹೌದು ಮೈಸೂರಿನ ಕಲಾಮಂದಿರ ರಸ್ತೆಯ ಪಕ್ಕದಲ್ಲಿ ವೆರೈಟಿ ವೆರೈಟಿ ಮಣ್ಣಿನ ಕುಡಿಕೆಗಳು, ಗಡುಗೆಗಳು ಮಾರುಕಟ್ಟೆಗಿಳಿದಿವೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲೆ ಈ ಮಣ್ಣಿನ ಕುಡಿಕೆಗಳು ದೊರೆಯುತ್ತಿವೆ. ಹೈದರಾಬಾದ್, ರಾಜಸ್ತಾನದಿಂದ ರವಾನೆಯಾದ ವಿಶೇಷ ಅಲಂಕಾರಿಕ ಮಣ್ಣಿನ ಕುಡಿಕೆಗಳು ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ.
ಜಿಲ್ಲೆಯಾಧ್ಯಂತ ಬೇಸಿಗೆ ಆರಂಭಕ್ಕೂ ಮುನ್ನ ಬಿಸಿಲಿನ ತಾಪ ಹೆಚ್ಚಾಗಿದೆ. ಬಿಸಿಲಿನಲ್ಲಿ ಹೊರ ಹೋಗಿ ಬಂದವರು ತಣ್ಣನೆಯ ನೀರು ಕುಡಿದು ಬಾಯಾರಿಕೆ ನೀಗಿಸಿಕೊಳ್ಳಲು ಇಷ್ಟಪಡುತ್ತಾರೆ. ಫ್ರೀಡ್ಜ್ ನಲ್ಲಿ ನೀರು ಕುಡಿದರೆ ಆರೋಗ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ ಎಲ್ಲ ವರ್ಗದ ಜನರು ಮಡಿಕೆಗಳ ಮೊರೆ ಹೋಗಿದ್ದಾರೆ. ಆಗಾಗಿ ಮೈಸೂರಿನಲ್ಲಿ ಸಹಜವಾಗಿಯೇ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ.
ಸಣ್ಣ, ಮಧ್ಯಮ, ದೊಡ್ಡ ಮಣ್ಣಿನ ಕುಡಿಕೆಗಳು ಗಾತ್ರಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಲಾಗಿದೆ. ಮಾರ್ಚ್ ಆರಂಭದಲ್ಲಿಯೇ ಬೇಸಿಗೆ ಬಿಸಿಲು ಆರಂಭವಾಗಿರುವ ಹಿನ್ನಲೆ ಮಣ್ಣಿನ ಮಡಿಕೆಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.
ಒಂದು ಕಾಲದಲ್ಲಿ ಮಹತ್ವ ಇದ್ದ ಮಣ್ಣಿನ ಮಡಿಕೆಗಳಿಗೆ ಮತ್ತೆ ಬೇಡಿಕೆ ಹೆಚ್ಚಾಗಿದೆ. ದೇಹ ತಂಪಾಗಿಸುವ ತಣ್ಣನೆಯ ನೀರಿಗಾಗಿ ಜನ ಮಣ್ಣಿನ ಗಡಿಗೆಯ ಮೊರೆ ಹೋಗುತ್ತಿದ್ದಾರೆ. ಮಣ್ಣಿನ ಗಡಿಗೆಯ ನೀರು ದೇಹಕ್ಕೆ ತಂಪು ನೀಡುವ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ಬೇಸಿಗೆಯಲ್ಲಿ ಮಣ್ಣಿನ ಮಡಿಕೆಗಳಿಗೆ ಆದ್ಯತೆ ನೀಡುತ್ತೇವೆ ಎನ್ನುತ್ತಿದ್ದಾರೆ ಮೈಸೂರಿನ ನಾಗರೀಕರು.
ಗ್ರಾಹಕರನ್ನ ಆಕರ್ಷಿಸಲು ಮೈಸೂರಿನ ಹಲವು ಕಡೆಗಳಲ್ಲಿ ವೆರೈಟಿ ಗಡಿಗೆ ಮಾರಾಟಕ್ಕಿಳಿದಿದ್ದು, ವರ್ಷವಿಡೀ ವ್ಯಾಪಾರವಿಲ್ಲದೆ ನೊಣ ಹೊಡೆಯುತ್ತಿದ್ದ ವ್ಯಾಪಾರಸ್ಥರಿಗೆ ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾಗಿರೋದರಿಂದ ವ್ಯಾಪಾರಸ್ತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.