ಚಾಮುಂಡಿಬೆಟ್ಟದಲ್ಲಿ ರಥೋತ್ಸವ ಹಿನ್ನೆಲೆ ಅ.28, 29 ರಂದು ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಮೈಸೂರು: ಚಾಮುಂಡಿಬೆಟ್ಟದಲ್ಲಿ ರಥೋತ್ಸವ ಹಿನ್ನೆಲೆಯಲ್ಲಿ ಅ.28 ರ ಸಂಜೆ 6 ರಿಂದ ಅ.29 ರ ಮಧ್ಯಾಹ್ನ 12 ರವರೆಗೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅಕ್ಟೋಬರ್ 28 ರ ಸಂಜೆ 6 ಗಂಟೆಯಿಂದ ಅಕ್ಟೋಬರ್ 29 ರ ಮಧ್ಯಾಹ್ನ 12 ಗಂಟೆಯವರೆಗೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕರ ಪ್ರವೇಶ ಹಾಗೂ ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಬರುವುದನ್ನು ನಿಷೇಧಿಸಿ ರೋಹಿಣಿ ಸಿಂಧೂರಿ ಅವರು ಆದೇಶಿಸಿದ್ದಾರೆ.

ಪ್ರವೇಶ ನಿಷೇಧವಿರುವ ದಿನಗಳಂದು ಕೇಂದ್ರ ಮತ್ತು ರಾಜ್ಯ ಸರ್ಕಾರವು ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು ಮತ್ತು ತುರ್ತು ಸೇವಾ ವಾಹನಗಳು ಹಾಗೂ ಗ್ರಾಮಸ್ಥರ ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕರ ವಾಹನ ಮತ್ತು ಖಾಸಗಿ ವಾಹನಗಳು ಬೆಟ್ಟಕ್ಕೆ ಬರುವುದುನ್ನು ನಿಷೇಧಿಸಿದೆ.

ಅಲ್ಲದೆ ಆ ದಿನಗಳಂದು ದೇವಾಲಯದ ಪ್ರದೇಶದಲ್ಲಿ ದೇವಾಲಯದ ವತಿಯಿಂದ ಹಾಗೂ ದಾನಿಗಳಿಂದ ಸಾಮೂಹಿಕವಾಗಿ ಹಾಗೂ ಸಾರ್ವಜನಿಕವಾಗಿ ಪ್ರಸಾದ ತಯಾರಿಸುವುದು, ವಿತರಿಸುವುದನ್ನು ನಿಷೇಧಿಸಲಾಗಿದೆ.

ದೇವಾಲದಲ್ಲಿ ಜರುಗುವ ರಥೋತ್ಸವ ಸಂಬಂಧಿತ ಧಾರ್ಮಿಕ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಯವರ ಉಪಸ್ಥಿತಿಯಲ್ಲಿ ಎಂದಿನಂತೆ ನಡೆಸಬಹುದು ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Leave a Comment

Scroll to Top