ಮೈಸೂರು ಚೆನ್ನೈ ನಡುವೆ ಮತ್ತೊಂದು ವಿಮಾನ ಸೇವೆಗೆ ಚಾಲನೆ

ಮೈಸೂರು: ಮೈಸೂರು-ಚೆನ್ನೈ ನಡುವೆ ನಿತ್ಯ ಬೆಳಿಗ್ಗೆ ಟ್ರೂಜೆಟ್ ಏರ್ ಲೈನ್ಸ್ ಸಂಸ್ಥೆಯ ಮತ್ತೊಂದು ವಿಮಾನವು (ಎಟಿಆರ್-72) ಹಾರಾಟ ಆರಂಭಿಸಲಿದ್ದು, ಇಂದು ಸಂಸದ ಪ್ರತಾಪ್ ಸಿಂಹ ಮತ್ತು ಮೇಯರ್ ಪುಷ್ಪಲತಾ ಜಗನ್ನಾಥ್ ಹಳದಿ ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಮೈಸೂರು-ಚೆನ್ನೈ ನಡುವೆ ಸಂಜೆ ವೇಳೆ ಸಂಚರಿಸುತ್ತಿರುವ ವಿಮಾನಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಪ್ರತಿದಿನ ಬೆಳಿಗ್ಗೆ ಚೆನ್ನೈ ಪ್ರಯಾಣಕ್ಕೆ ಭಾರೀ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಟ್ರೂಜೆಟ್ ವಿಮಾನ ಹಾರಾಟ ಆರಂಭಿಸಲಾಗುತ್ತಿದೆ.

ಚೆನ್ನೈನಿಂದ ಬೆಳಗ್ಗೆ6.50ಕ್ಕೆ ಹೊರಟು ಬೆಳಗ್ಗೆ 8.10ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಅದೇ ವಿಮಾನವು ಬೆಳಗ್ಗೆ 8.30ಕ್ಕೆ ಮೈಸೂರಿನಿಂದ ಹೊರಟು 10 ಗಂಟೆಗೆ ಚೆನ್ನೈಗೆ ತಲುಪಲಿದೆ. ಸಂಜೆ ವೇಳೆ ಸಂಚರಿಸುವಂತೆ ಮೈಸೂರು-ಚೆನ್ನೈ ನಡುವಿನ ವಿಮಾನ ಹಾರಾಟಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದ ಹಿನ್ನೆಲೆಯಲ್ಲಿ ಟ್ರೋಜೆಟ್ ವಿಮಾನ ಪ್ರತಿನಿತ್ಯ ಬೆಳಗ್ಗೆ ತನ್ನ ಹಾರಾಟವನ್ನು ಆರಂಭಿಸುತ್ತಿದೆ.

ಉಡಾನ್ ಯೋಜನೆಯ ನಂತರ ಸೇವೆ ಒದಗಿಸುತ್ತಿರುವ ಪ್ರಥಮ ವಿಮಾನ ಇದಾಗಿದ್ದು, ಸರ್ಕಾರದ ಯಾವುದೇ ಸಬ್ಸಿಡಿ ಅಪೇಕ್ಷಿಸದೇ ಹಾರಾಟ ಸೇವೆ ಒದಗಿಸಲಿದೆ. ಬೆಳಗಿನ ಫ್ಲೈಟ್ ಗೆ ಭಾರೀ ಬೇಡಿಕೆ ಇದ್ದು, ಒಂದು ಟ್ರಿಪ್ ಗೆ ಶೇ.85ರಷ್ಟು ಆಸನಗಳು ಭರ್ತಿಯಾಗುತ್ತವೆ ಎಂಬುದನ್ನು ಟ್ರೂಜೆಟ್ ಖಾತರಿ ಪಡಿಸಿಕೊಂಡಿದ್ದು, ಈಗಾಗಲೇ ಆನ್ ಲೈನ್ ನಲ್ಲಿ ಟಿಕೇಟ್ ಬುಕ್ಕಿಂಗ್ ಆರಂಭವಾಗಿದೆ. ಉದ್ಯಮಿಗಳು, ವ್ಯಾಪಾರಸ್ಥರು ಪ್ರವಾಸಿಗರು, ತಮಿಳ್ನಾಡು ಮೂಲದವರಿಂದ ಬೆಳಗಿನ ವಿಮಾನಕ್ಕೂ ಬೇಡಿಕೆ ಬಂದಿದೆ.

ಮೈಸೂರಿನಿಂದ ಹೈದ್ರಾಬಾದ್, ಕೊಚ್ಚಿ, ಬೆಂಗಳೂರು, ಗೋವಾ, ಚೆನ್ನೈಗಳಿಗೆ ಇಂಡಿಗೀ ಏರ್ ಲೈನ್ಸ್ ಅಲಯನ್ಸ್ ಏರ್ ಲೈನ್ಸ್ ಹಾಗೈ ಟ್ರೂಜೆಟ್ ಸಂಸ್ಥೆಗಳ ಒಟ್ಟು 6 ವಿಮಾನಗಳು 12 ಟ್ರಿಪ್ ಹಾರಾಟ ನಡೆಸುತ್ತಿವೆ. ಇಂದಿನಿಂದ ಟ್ರೂಜೆಟ್ ನ ಮತ್ತೊಂದು ವಿಮಾನ ಕಾರ್ಯಾರಂಭ ಮಾಡುತ್ತಿರುವುದರಿಂದ ಒಟ್ಟು 7 ವಿಮಾನಗಳು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದಂತಾಗಲಿದೆ.

Scroll to Top