ಐಎಂಎಫ್‌ನ ಮೊದಲ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಮೈಸೂರು ಮೂಲದ ಗೀತಾ ಅಧಿಕಾರ ಸ್ವೀಕಾರ

ಐಎಂಎಫ್‌ನ ಮೊದಲ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಮೈಸೂರು ಮೂಲದ ಗೀತಾ ಅಧಿಕಾರ ಸ್ವೀಕಾರ

ವಾಷಿಂಗ್ಟನ್‌: ಮೈಸೂರು ಮೂಲದ ಗೀತಾ ಗೋಪಿನಾಥ್‌ ಅವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್) ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞರಾಗಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಗೀತಾ ಅವರು ಐಎಂಎಫ್‌ನ 11ನೇ ಮುಖ್ಯ ಆರ್ಥಿಕ ತಜ್ಞೆಯಾಗಿ ಕಾರ್ಯನಿರ್ವಹಿಸಲಿದ್ದು, ಕಳೆದ ಅಕ್ಟೋಬರ್‌ 1ರಂದೇ ಅವರ ನೇಮಕವನ್ನು ಪ್ರಕಟಿಸಲಾಗಿತ್ತು.

ಜಾಗತಿಕ ಆರ್ಥಿಕತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಐಎಂಎಫ್ ನ ಮುಖ್ಯ ಆರ್ಥಿಕ ತಜ್ಞರಾಗಿ ಗೀತಾಗೋಪಿನಾಥ್ ಅಧಿಕಾರ ವಹಿಸಿಕೊಂಡಿದ್ದು ಅವರೆದುರು ಹಲವು ಸವಾಲುಗಳಿದ್ದು ಹೊಸ ಮುಖ್ಯಸ್ಥರ ಮೇಲೆ ನಿರೀಕ್ಷೆಗಳೂ ಹೆಚ್ಚಾಗಿಯೇ ಇವೆ.

ಮೈಸೂರಿನಲ್ಲಿ 1971ರ ಡಿಸೆಂಬರ್‌ 8ರಂದು ಜನಿಸಿದ ಗೀತಾ ಗೋಪಿನಾಥ್‌ ಅವರ ಅಪ್ಪ -ಅಮ್ಮ ಮೂಲತಃ ಕೇರಳದವರು. ಪ್ರಾಥಮಿಕ ಶಿಕ್ಷಣ ಕೂಡ ಮೈಸೂರಿನಲ್ಲೇ. ನಂತರ ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ಪದವಿ ಪಡೆಯುತ್ತಾರೆ ಆ ನಂತರ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಐಎಂಎಫ್ ನ ಹುದ್ದೆಗೇರುವವರೆಗೂ ಗೀತಾಗೋಪಿನಾಥ್ ಅವರು ಅಮೆರಿಕಾದ ಹಾರ್ವಾರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಟರ್ನ್ಯಾಷನಲ್ ಸ್ಟಡೀಸ್ ಮತ್ತು ಎಕನಾಮಿಕ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು.

ಐಎಂಎಫ್‌ಗೆ ನೇಮಕವಾಗುವ ಮೊದಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಹಣಕಾಸು ಸಲಹೆಗಾರರಾಗಿ ನೇಮಕಗೊಂಡಿದ್ದರು. ಕೇರಳದ ಎಡ ರಾಜಕೀಯ ವಲಯದಲ್ಲಿ ಲಿಬರಲ್ ಮನೋಭಾವದ ಗೀತಾರನ್ನ ನೇಮಕ ಮಾಡಿದ್ದು ಚರ್ಚೆಯ ವಿಷಯವಾಗಿತ್ತು. ಐಎಂಎಫ್ ಸಂಸ್ಥೆಯ ಆಡಳಿತ ಮಂಡಳಿಗೆ ಭಾರತದ ಮಾಜಿ ಆರ್ ಬಿಐ ಗೌರ್ನರ್ ರಘುರಾಮ ರಾಜನ್ ಅವರು ಸಹ ಚೀಫ್ ಎಕನಾಮಿಸ್ಟ್ ಆಗಿ ಸೇವೆ ಸಲ್ಲಿಸಿದ್ದರು.

Scroll to Top