ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ನೆಲಮಾಳಿಗೆಯಿಂದ ದರ್ಬಾರ್ ಹಾಲ್‌ಗೆ ತಂದು ಜೋಡಿಸಲಾಗಿದ್ದ ರತ್ನ ಖಚಿತ ಸಿಂಹಾಸನವನ್ನು ಸೂಕ್ತ ಪೊಲೀಸ್ ಬಂದೋಬಸ್ತ್ ನಲ್ಲಿ ಸ್ಟ್ರಾಂಗ್ ರೂಂಗೆ ಸಾಗಿಸಲಾಗಿದೆ.
ಬುಧವಾರ ರತ್ನ ಖಚಿತ ಸಿಂಹಾಸನದ ಅವರೋಹಣ ಕಾರ್ಯಕ್ರಮ ನಡೆದಿದ್ದು, ಅರಮನೆ ಕನ್ನಡಿ ತೊಟ್ಟಿಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ನೆರವೇರಿಸಲಾಯಿತು. ಬಳಿಕ ದರ್ಬಾರ್ ಹಾಲ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಕಂಗೊಳಿಸುತ್ತಿದ್ದ ಸಿಂಹಾಸನ ವನ್ನು ಮೊದಲಿಗೆ 14 ಬಿಡಿ ಭಾಗಗಳಾಗಿ ವಿಂಗಡಿಸಲಾಯಿತು. ಬಳಿಕ ಬಿಡಿ ಭಾಗಗಳನ್ನು ಸೂಕ್ತ ಪೊಲೀಸ್ ಬಂದೋಬಸ್ತ್ ನಲ್ಲಿ ಸುರಕ್ಷಿತವಾಗಿ ಸ್ಟ್ರಾಂಗ್ ರೂಂಗೆ ಸಾಗಿಸಲಾಯಿತು.
ಈ ಬಿಡಿ ಭಾಗಗಳನ್ನು ಮುಂದಿನ ದಸರಾ ಮಹೋತ್ಸವಕ್ಕೆ ಮತ್ತೆ ಹೊರಕ್ಕೆ ತೆಗೆಯಲಾಗುತ್ತದೆ. ಸೆ. 29 ರಿಂದ ಅ.6 ರವರೆಗೆ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್ ನಡೆಸಿದ್ದರು.