ಇನ್ನುಮುಂದೆ ಮೈಸೂರಿನಲ್ಲಿ ನಡೆಯುವ ಸಭೆ, ಸಮಾರಂಭ ಸ್ಥಳದಲ್ಲಿ ಹೈಟೆಕ್‌ ಮೊಬೈಲ್‌ ಶೌಚಾಲಯ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಬಯಲು ಶೌಚಾಲಯ ತಡೆಯಲು ಹೊಸ ಚಿಂತನೆ ನಡೆಸಲಾಗಿದೆ. ಇನ್ನು ಮುಂದೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರು ಜನರು ಸೇರುವ ಸಭೆ, ಸಮಾರಂಭ ನಡೆಯುವ ಸ್ಥಳದಲ್ಲಿ ಜನರು ಶೌಚಾಲಯವಿಲ್ಲದೆ ಪರಿತಪಿಸುವ ಸನ್ನಿವೇಶ ದೂರವಾಗಲಿದೆ.

ಹೌದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ನವರು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಕಾರ್ಯಕ್ರಮದಡಿ ಮೊಬೈಲ್ ಶೌಚಾಲಯಗಳನ್ನು ನಗರಪಾಲಿಕೆಗೆ ಕೊಡುಗೆಯಾಗಿ ನೀಡಿದ್ದಾರೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಎಲ್.ಪಿ.ಜಿ ಪೈಪ್ ಲೈನ್, ಮೈಸೂರು ವಿಭಾಗ ರವರು ಸಿ.ಎಸ್.ಆರ್ ಕಾರ್ಯಕ್ರಮದ ಭಾಗವಾಗಿ 17.98 ಲಕ್ಷ ರೂ. ವೆಚ್ಚದ 2 ಮೊಬೈಲ್ ಶೌಚಾಲಯ ವಾಹನಗಳನ್ನು (ತಲಾ 12 ಆಸನ ಸಾಮರ್ಥ್ಯದ) ಕೊಡುಗೆಯಾಗಿ ನೀಡಿದೆ.

ದಸರಾ ಮಹೋತ್ಸವ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂತಹ ಬೃಹತ್‌ ಕಾರ್ಯಕ್ರಮಗಳ ಸಂದರ್ಭದಲ್ಲಿ ಮೊಬೈಲ್‌ ಶೌಚಾಲಯಗಳು ಬೇಕಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಜಿಲ್ಲಾಡಳಿತ ಖಾಸಗಿಯವರಿಂದ ಮೊಬೈಲ್‌ ಶೌಚಾಲಯಗಳನ್ನು ಬಾಡಿಗೆಗೆ ಪಡೆದು ಬಳಸುತ್ತಿತ್ತು. ಆದರೆ ಇದೀಗ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ನವರು ಮೊಬೈಲ್ ಶೌಚಾಲಯಗಳನ್ನು ಕೊಡುಗೆಯಾಗಿ ನೀಡಿರುವುದು ಮೈಸೂರಿನ ನಾಗರಿಕರ ಸುವ್ಯವಸ್ಥೆಗೆ ಮತ್ತು ನಗರದಲ್ಲಿ ವಿಶೇಷ ಸಂದರ್ಭಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಮೈಸೂರಿಗೆ ಭೇಟಿ ನೀಡುವ ಜನರಿಗೆ ಉಪಯೋಗವಾಗಲಿದೆ.

ವಿಶೇಷತೆ ಏನು..?

ಈ ನೂತನ ಹೈಟೆಕ್‌ ಶೌಚಾಲಯಗಳಿಗೆ ವಿದ್ಯುತ್‌ ಸಂಪರ್ಕವಿದ್ದು ಹಗಲು ಹಾಗೂ ರಾತ್ರಿ ವೇಳೆಯೂ ಬಳಕೆ ಮಾಡಬಹುದಾಗಿದೆ. ಅಲ್ಲದೆ ನೀರಿನ ಸಂಪರ್ಕವಿದ್ದು, ಹೊರಗಿನಿಂದ ವಾಹನಗಳಲ್ಲಿ ನೀರನ್ನು ತಂದು ಈ ಹೈಟೆಕ್‌ ಶೌಚಾಲಯದ ವಾಹನಗಳಿಗೆ ತುಂಬಿಸಬಹುದಾಗಿದೆ. ಒಂದು ವಾಹನದಲ್ಲಿ ಒಂದು ಕಡೆ ಆರು ಶೌಚಾಲಯಗಳಂತೆ ಒಟ್ಟು 12 ಶೌಚಾಲಯಗಳಿವೆ. ಯಾವುದೇ ಸಾರ್ವಜನಿಕ ಬೃಹತ್‌ ಕಾರ್ಯಕ್ರಮಗಳು ನಡೆಯುವಲ್ಲಿ ಈ ವಾಹನವನ್ನು ನಿಲ್ಲಿಸಿ, ಬಳಕೆ ಮಾಡಬಹುದು.

Scroll to Top