ಬ್ರಿಟನ್‌ ನೂತನ ಹಣಕಾಸು ಸಚಿವರಾಗಿ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ನೇಮಕ

ಲಂಡನ್: ಬ್ರಿಟನ್ ನೂತನ ಹಣಕಾಸು ಸಚಿವರಾಗಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್‍ರನ್ನು ನೇಮಕ ಮಾಡಲಾಗಿದೆ. 39 ವರ್ಷದ ರಿಷಿ ಅವರು ಬ್ರಿಟನ್‌ ಸರ್ಕಾರದಲ್ಲಿನ ಎರಡನೇ ಅತ್ಯಂತ ಮಹತ್ವದ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಹಾಲಿ ವಿತ್ತ ಸಚಿವ ಸಾಜಿದ್ ಜಾವಿದ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಿಷಿ ಸುನಕ್‍ರನ್ನು ಪ್ರಧಾನಿ ಬೋರಿಸ್ ಜಾನ್ಸನ್ ಜಾನ್ಸನ್ ನೇಮಕ ಮಾಡಿದ್ದಾರೆ. ಬ್ರಿಟನ್ ಸಂಸತ್ತಿಗೆ 2015ರಲ್ಲಿ ಆಯ್ಕೆಯಾಗಿದ್ದ ರಿಷಿ ಸುನಕ್, ಹಿಂದೆ ಖಜಾನೆ ಇಲಾಖೆ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಹಣಕಾಸು ಸಚಿವರಾಗಿ ನೂತನ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ.

ಪ್ರತಿಷ್ಠಿತ ವಿಂಚೆಸ್ಟರ್ ಕಾಲೇಜಿನಲ್ಲಿ ಅಧ್ಯಯನ ನಡೆಸಿರುವ ಸುನಕ್, ಆಕ್ಸ್‍ಫರ್ಡ್ ವಿವಿಯಲ್ಲಿ ರಾಜಕೀಯ, ಫಿಲಾಸಫಿ ಮತ್ತು ಅರ್ಥಶಾಸ್ತ್ರದಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಅಮೆರಿಕಾ ಸ್ಟಾನ್‍ಫರ್ಡ್ ವಿವಿಯಲ್ಲಿ ಎಂಬಿಎ ಪದವಿ ಕೂಡ ಮಾಡಿದ್ದಾರೆ.

ಸುನಕ್ ತಂದೆ ವೈದ್ಯರಾಗಿದ್ದು, ತಾಯಿ ರಾಸಾಯನಿಕ ವಸ್ತುಗಳ ಅಂಗಡಿ ನಡೆಸುತ್ತಿದ್ದರು. ರಾಜಕೀಯಕ್ಕೆ ಕಾಲಿಡುವ ಮೊದಲು ಹೂಡಿಕೆ ಬ್ಯಾಂಕ್ ಗೋಲ್ಡ್‍ಮನ್ ಸ್ಯಾಶ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಂತರ ಹೂಡಿಕೆ ಕಂಪನಿಯೊಂದನ್ನು ಸ್ಥಾಪಿಸಿದ್ದರು. ಕೆಲವೇ ತಿಂಗಳ ಹಿಂದೆ ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಪುನರಾಯ್ಕೆಯಾಗಿದ್ದರು. ಇದೀಗ ಹಣಕಾಸು ಸಚಿವರಾಗಿ ಆಯ್ಕೆಯಾಗಿರುವ ರಿಷಿ ಅವರಿಗೆ ಗಣ್ಯಾತಿಗಣ್ಯರು ಅಭಿನಂದನೆ ತಿಳಿಸಿದ್ದಾರೆ.

Leave a Comment

Scroll to Top