ಮೈಸೂರು – ಬೆಂಗಳೂರು : ‘ಟಿಪ್ಪು ಎಕ್ಸ್‌ಪ್ರೆಸ್‌’ನಲ್ಲಿ ಇಂದು ಮಹಿಳಾ ಸಿಬ್ಬಂದಿಗಳದ್ದೆ ಕಾರುಬಾರು..!

ಮೈಸೂರು: ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್‌ಪ್ರೆಸ್‌ನಲ್ಲಿ ಇಂದು ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ಕರ್ತವ್ಯದಲ್ಲಿದ್ದದ್ದು ಎಲ್ಲರ ಗಮನ ಸೆಳೆಯಿತು.

ಮಾರ್ಚ್ 1 ರಿಂದ ಮಾರ್ಚ್ 10 ರವರೆಗೆ 10 ದಿನಗಳ ಕಾಲ ಭಾರತೀಯ ಮಹಿಳಾ ದಿನಾಚರಣೆಯ ಅಭಿಯಾನವನ್ನು ಭಾರತೀಯ ರೈಲ್ವೆಯಾದ್ಯಂತ ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ವತಿಯಿಂದ ಇಂದು ಈ ವಿನೂತನ ಪ್ರಯತ್ನ ನಡೆಸಲಾಯಿತು.

ಈಗಾಗಲೇ ಮೈಸೂರು ವಿಭಾಗವು ಆರೋಗ್ಯ ತಪಾಸಣೆ, ಯೋಗ ಶಿಬಿರಗಳು, ಚಾರಣ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಂತಹ ವಿವಿಧ ಚಟುವಟಿಕೆಗಳನ್ನು ಆಯೋಜಿಸಿದೆ, ಲಿಂಗ ಸಮಾನ ಕೆಲಸದ ಸ್ಥಳವನ್ನು ನಿರ್ಮಿಸಲು ಮತ್ತು ಕೆಲಸದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣದ ಮನೋಭಾವಕ್ಕೆ ಪೂರಕವಾಗಿ ಈ ಚಟುವಟಿಕೆ ನಡೆಸಲು ಉದ್ದೇಶಿಸಿದೆ.

ಈ ಸಲುವಾಗಿ ರೈಲ್ವೆ ವಿಭಾಗದ ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್, ಗಾರ್ಡ್, ಟಿಕೆಟ್ ಪರಿಶೀಲನಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಗಳನ್ನು ಒಳಗೊಂಡ ಎಲ್ಲ ಮಹಿಳಾ ಸಿಬ್ಬಂದಿ ಗುರುವಾರದ ಅಭಿಯಾನದಲ್ಲಿ ಭಾಗವಹಿಸಿದ್ದರು.

ಈ ವರ್ಷದ ಅಭಿಯಾನ “ಪ್ರತಿಯೊಬ್ಬರಿಗೂ ಸಮಾನ” ವಿಷಯಕ್ಕೆ ಪೂರಕವಾಗಿ ಉತ್ಸಾಹಕ್ಕೆ ತಕ್ಕಂತೆ ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್‌ಪ್ರೆಸ್‌ನಲ್ಲಿ ಇಂದು ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ಕರ್ತವ್ಯದಲ್ಲಿದ್ದದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಎಲ್ಲ ಮಹಿಳಾ ಸಿಬ್ಬಂದಿಗೆ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್ ಶುಭಾಶಯ ಕೋರಿದರು. ಈ ವೇಳೆ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ ದೇವಸಹಾಯಂ, ಹಿರಿಯ ಶಾಖಾ ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಉಪಸ್ಥಿತರಿದ್ದರು.

Leave a Comment

Scroll to Top