ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ನೈರುತ್ಯ ರೈಲ್ವೆ ಮೈಸೂರು ವಿಭಾಗ ಈಗಾಗಲೇ ರೈಲು ಗಾಡಿಗಳ ಸೇವೆಯನ್ನು ಸ್ಥಗಿತಗೊಳಿಸಿದ್ದು, ಅದೇ ರೈಲು ಹಳಿಗಳು, ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಕೆಯಾಗಲಿವೆ ಎಂದು ತಿಳಿದು ಬಂದಿದೆ. ಮುಂದಿನ 10 ದಿನಗಳಲ್ಲಿ ಮೈಸೂರಿನಲ್ಲಿ 150 ರೈಲ್ವೆ ಬೋಗಿಗಳು ಐಸೋಲೇಶನ್ ವಾರ್ಡ್‌ಗಳಾಗಿ ರೂಪುಗೊಳ್ಳಲಿವೆ.
ರೈಲ್ವೆ ಮಂಡಳಿಯ ತೀರ್ಮಾನದಂತೆ ಕ್ವಾರೆಂಟೈನ್‌ನಲ್ಲಿ ಇರಬೇಕಾದ ವ್ಯಕ್ತಿಗಳ ವಾಸ್ತವ್ಯಕ್ಕಾಗಿ ಮೈಸೂರಿನಲ್ಲಿ 138 ಕೋಚ್‌ಗಳನ್ನು ಕೋವಿಡ್ -19 ಕ್ವಾರೆಂಟೈನ್ ಕೋಚ್ ಆಗಿ ಪರಿವರ್ತಿಸುವ ಕಾರ್ಯ ಭರದಿಂದ ಸಾಗಿದ್ದು, 10 ದಿನಗಳಲ್ಲಿ ರೈಲ್ವೆ ಕೋಚ್‌ಗಳು ಕೋವಿಡ್ ಕ್ವಾರಂಟೈನ್ ಕೋಚ್‌ಗಳಾಗಿ ಬದಲಾಗಲಿವೆ. ಸೀನಿಯರ್ ಡಿವಿಜನಲ್ ಮೆಕ್ಯಾನಿಕಲ್ ಇಂಜಿನಿಯರ್ ಶಾಂತಿ ಬಾಬು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಈಗಾಗಲೇ ಬೋಗಿಗಳಲ್ಲಿರುವ ವಸ್ತುಗಳನ್ನು ತೆರವುಗೊಳಿಸಿ, ವೈದ್ಯಕೀಯ ಸೇವೆಗೆ ಅಗತ್ಯವಿರುವಂತೆ ಕೋಚ್ ಬದಲಿಸುವ ಕಾರ್ಯ ಆರಂಭಿಸಲಾಗಿದ್ದು, ಬಳಿಕ ನಾನಾ ಹಂತಗಳಲ್ಲಿ ಹಲವು ಬದಲಾವಣೆ ಮೂಲಕ ಬೋಗಿಗಳನ್ನು ಐಸೋಲೇಶನ್ ವಾರ್ಡ್ ಆಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದ್ದಾರೆ.
ಮೈಸೂರಿನ ರೈಲ್ವೆ ನಿಲ್ದಾಣದಲ್ಲಿರುವ ಬಿಇಒ ಕಚೇರಿ ಬಳಿ 18 ಹಾಗೂ ವರ್ಕ್ ಶಾಪ್ ಆವರಣದಲ್ಲಿ 120 ಕೋಚ್‌ಗಳನ್ನು ಐಸೋಲೇಶನ್ ವಾರ್ಡ್‌ಗಳಾಗಿ ಪರಿವರ್ತಿಸಲಾಗುತ್ತಿದ್ದು, ಅಲ್ಲಿ ರೋಗಿಗಳು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಬೇಕಾದ ಗಾಳಿ, ಬೆಳಕು, ಕುಡಿಯುವ ನೀರು, ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಕೋಚ್‌ನಲ್ಲಿರಲಿದೆ.
ರೈಲು ಬೋಗಿಗಳನ್ನು ಕೋವಿಡ್-19 ವಾರ್ಡ್‍ಗಳಾಗಿ ಪರಿವರ್ತಿಸುವ ಕೆಲಸ ಆರಂಭವಾಗಿದ್ದು, ಸದ್ಯದಲ್ಲೇ ಐಸೋಲೇಷನ್ ವಾರ್ಡುಗಳು ಸಿದ್ಧಗೊಳ್ಳಲಿವೆ. ಪ್ರತಿ ಕೋಚ್‌ನಲ್ಲಿಯೂ 8 ಪ್ರತ್ಯೇಕ ಕ್ಯಾಬಿನ್ ನಿರ್ಮಾಣವಾಗಲಿದ್ದು, ಲ್ಯಾಪ್ ಟಾಪ್, ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಜಾಗ, ಸೊಳ್ಳೆ ಪರದೆ ಬಳಕೆ ಮಾಡಲು ವ್ಯವಸ್ಥೆ, ಚಿಕಿತ್ಸೆಗೆ ಬೇಕಾದ ವಸ್ತುಗಳನ್ನು ಇಡಲು ಸ್ಪೇಸ್, ವಾಟರ್ ಬಾಟಲ್ ಇಟ್ಟುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಯಾರೂ ಒಳಗೆ ಹಾಗೂ ಹೊರಗೆ ಹೋಗಲು ಸಾಧ್ಯವಾಗದಂತೆ ಕೋಚ್‌ನ ಪ್ರವೇಶ ಹಾಗೂ ನಿರ್ಗಮನ ದ್ವಾರವನ್ನು ಸಂಪೂರ್ಣವಾಗಿ ಮುಚ್ಚಲು ವ್ಯವಸ್ಥೆ ಮಾಡಲಾಗಿದೆ.
ರೋಗಿಗಳಿಗೆ ಅಗತ್ಯವಾದ ಆಮ್ಲಜನಕದ ಸಿಲಿಂಡರ್ ಇರಿಸಲು ಸೂಕ್ತ ವ್ಯವಸ್ಥೆ ಸಹ ಇಲ್ಲಿ ಕಲ್ಪಿಸಲಾಗುತ್ತಿದ್ದು, ಕ್ವಾರೆಂಟೈನ್ ಆಗುವವರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಪ್ರತಿ ಕೋಚ್‌ನಲ್ಲಿ ಎರಡು ಸ್ನಾನದ ಕೋಣೆ, ಎರಡು ಶೌಚಾಲಯ ವ್ಯವಸ್ಥೆ ಯಿರಲಿದೆ. 110 ವೋಲ್ಟ್ ಡಿಸಿ ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆ ಕೂಡ ನಡೆಸಲಾಗುತ್ತಿದೆ.