ಕೆ.ಆರ್.ನಗರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ತಾಲೂಕಿನ ಚುಂಚನಕಟ್ಟೆ ಹೋಬಳಿ ಕೇಂದ್ರದಲ್ಲಿ ಸೆ.21 ಮತ್ತು 22ರಂದು ಕಾವೇರಿ ಜಲಪಾತೋತ್ಸವ ನಡೆಯಲಿದೆ. ಕಾರ್ಯಕ್ರಮ ನಡೆಯುವ ಎರಡು ದಿನಗಳ ಕಾಲ ಅಂದಾಜು 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು ಭರದ ಸಿದ್ಧತೆಗಳು ನಡೆಯುತ್ತಿವೆ.
ಜಲಪಾತೋತ್ಸವ ವೀಕ್ಷಿಸಲು ಆಗಮಿಸುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾವೇರಿ ನದಿ ದಂಡೆಯಲ್ಲಿರುವ ಶ್ರೀರಾಮ ದೇವಾಲಯದ ಹಿಂಭಾಗ ಹೊಸದಾಗಿ ನಿರ್ಮಾಣ ಮಾಡಿರುವ ಕಾವೇರಿ ಜಲಪಾತೋತ್ಸವ ವೇದಿಕೆಗೆ ಬೃಹತ್ ಪೆಂಡಾಲ್ ನಿರ್ಮಾಣ ಮಾಡುತ್ತಿದ್ದು, ಇದರ ಜತೆಗೆ 10 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿಯುವ ನೀರು, ಪಾರ್ಕಿಂಗ್, ತಾತ್ಕಾಲಿಕ ಶೌಚಾಲಯ ಸೇರಿದಂತೆ ಇತರ ಅಗತ್ಯ ಮೂಲಭೂತ ಸವಲತ್ತುಗಳನ್ನು ಒದಗಿಸಲು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ.
ಸೆ. 21ರಂದು ನಡೆಯುವ ಕಾರ್ಯಕ್ರಮಗಳು:
ಸೆ. 21ರ ಸಂಜೆ 6ಕ್ಕೆ ವೇದಿಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆ ಬಳಿಕ ರಾತ್ರಿ 7ಕ್ಕೆ ಸರಿಗಮಪ ಖ್ಯಾತಿಯ ಗಾಯಕರಾದ ಶ್ರೀಹರ್ಷ, ಇಂಪನಾ, ಸುಹಾನ ಸೈಯದ್, ಸುಪ್ರೀತ್‌ಫಲ್ಗುಣ, ಕಲಾವತಿ ಅರವಿಂದ್, ಶ್ರೀಕಾರ್ ಮತ್ತು ನೃತ್ಯ ತಂಡದವರಿಂದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
8ಕ್ಕೆ ನಟಿ ಮಾನ್ವಿತ ಹರೀಶ್ ಮತ್ತು ಇತರ ಚಿತ್ರನಟರಿಂದ ವಿವಿಧ ಮನರಂಜನ ಕಾರ್ಯಕ್ರಮಗಳು ನೆರವೇರಲಿದ್ದು, 9ಕ್ಕೆ ಸೀರಿಯಲ್ ಸಂತೆ ಧಾರವಾಹಿ ಕಲಾವಿದರಾದ ದೀಪಿಕಾ ದಾಸ್, ರಶ್ಮಿ ಪ್ರಭಾಕರ್, ಯಶಸ್ವಿನಿ ಹಾಗೂ ನೃತ್ಯ ತಂಡದವರು ಭಾಗವಹಿಸಿ ಮನರಂಜನೆ ನೀಡುವರು.
ಸೆ.22ರಂದು ನಡೆಯುವ ಕಾರ್ಯಕ್ರಮಗಳು:
ಸೆ.22ರ ಭಾನುವಾರ ಸಂಜೆ 6 ರಿಂದ ರಾತ್ರಿ 9 ರವರೆಗೆ ಹಿನ್ನೆಲೆ ಗಾಯಕರಾದ ಇಂದೂ ನಾಗರಾಜ್, ಶಶಾಂಕ್, ಶೇಷಗಿರಿ, ಚಿನ್ಮಯ, ಆತ್ರೇಯ, ಸಂಗೀತ ರವೀಂದ್ರನಾಥ್, ಅನಿರುದ್ದ ಶಾಸ್ತ್ರಿ, ದಿವ್ಯರಾಮಚಂದ್ರ ಮತ್ತು ನೃತ್ಯ ತಂಡದವರಿಂದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ರಾತ್ರಿ 9 ರಿಂದ 10ರವೆರೆಗೆ ಚಿತ್ರ ನಟಿಯರಾದ ಕಾವ್ಯಗೌಡ, ಅಶ್ವಿನಿ, ಅದ್ವಿತಿ, ಐಶ್ವರ್ಯ ಮತ್ತು ನೃತ್ಯ ತಂಡದವರಿಂದ ಸ್ಟಾರ್‌ನೈಟ್ ನಡೆಯಲಿದ್ದು, ವಾಸ್ತುಪ್ರಕಾರ ಖ್ಯಾತಿಯ ನಟಿ ಐಶಾನಿ ಶೆಟ್ಟಿ ಪಾಲ್ಗೊಳ್ಳುವರು.