ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಾರಾಪುರ ಗ್ರಾಮದ ಬಾವಿಯೊಂದರಲ್ಲಿ ಬಿದ್ದಿದ್ದ ಚಿರತೆಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಕಾರಾಪುರ ಗ್ರಾಮದಲ್ಲಿ ಸುಮಾರು ನೂರು ಅಡಿ ಆಳದ ಪಾಳು ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದ 3 ವರ್ಷದ ಚಿರತೆಯನ್ನು ಅರಣ್ಯಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅರವಳಿಕೆ ಮದ್ದು ನೀಡಿ ಸಂರಕ್ಷಣೆ ಮಾಡಿದರು. ಈ ಮೂಲಕ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಚಿರತೆ ರಕ್ಷಣೆ ಕಾರ್ಯಾಚರಣೆ ಸೋಮವಾರ ಕೊನೆಗೊಂಡಿದೆ.
ಶನಿವಾರ ಸಂಜೆ ಚಿರತೆಯೊಂದು ಸುಮಾರು ನೂರು ಅಡಿ ಆಳದ ಬಾವಿಗೆ ಬಿದ್ದಿರುವ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿಯನ್ನು ಆಧರಸಿ ಸ್ಥಳಕ್ಕೆ ಬೋನು, ಬಲೆ ಸಮೇತ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆಗೆ ಹುಡುಕಾಟ ನಡೆಸಿದರು. ಆದರೆ ಅವರಿಗೆ ಎಲ್ಲೂ ಚಿರತೆಯ ಸುಳಿವು ಸಿಕ್ಕಿರಲಿಲ್ಲ.
ಕೊನೆಗೆ ಅಂತರಸಂತೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಸಿದ್ದರಾಜು ಬೋನಿನೊಳಗೆ ಕುಳಿತು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಪರಿಶೀಲಿಸಿದ್ದರು. ಆದರೆ ಅಂದು ಅಲ್ಲೆಲ್ಲೂ ಚಿರತೆ ಇರುವ ಕುರುಹೇ ಸಿಗಲಿಲ್ಲ.
ಆದರೆ, ಬಾವಿಯೊಳಗೆ ಚಿರತೆ ಬಿದ್ದಿರುವುದು ನಿಜ ಮತ್ತು ಈ ಬಾವಿಯೊಳಗೆ ಕೊರಕಲು ಗುಹೆ ಇದ್ದು, ಅದರಲ್ಲಿ ಚಿರತೆ ಅವಿತು ಕುಳಿತಿರಬಹುದೆಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ ಬಳಿಕ ಭಾನುವಾರ ಕೂಡ ಅರಣ್ಯಾಧಿಕಾರಿಗಳು ಚಿರತೆ ಪತ್ತೆಗಾಗಿ ಬಾವಿಯೊಳಗೆ ಸಿಸಿ ಕ್ಯಾಮರಾ ಇಳಿಸಲಾಯಿತು. ಚಿರತೆ ಬಾವಿಯೊಳಗೆ ಓಡಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬಳಿಕ ಬಾವಿಗೆ ಇಳಿದ ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಚುಚ್ಚುಮದ್ದು ನೀಡಿದ್ದು, ಚಿರತೆಯನ್ನು ಮೇಲಕ್ಕೆತ್ತಿದ್ದಾರೆ.
ಈ ಮೂಲಕ ಕತ್ತಲು ತುಂಬಿದ್ದ ಆಳ ಬಾವಿಯಲ್ಲಿ ಕೊರಕಲಿನಲ್ಲಿ ಅಡಗಿ ಕುಳಿತಿದ್ದ ಚಿರತೆಯನ್ನು ಜೀವಂತವಾಗಿ ಹಿಡಿದು ರಕ್ಷಿಸುವಲ್ಲಿ ಯಶಸ್ವಿಯಾದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.