ದೇವರಾಜ ಮಾರುಕಟ್ಟೆಗೆ ಪತ್ನಿ ಸಮೇತ ಮಹಾರಾಜ ಯದುವೀರ್ ದಿಢೀರ್ ಭೇಟಿ: ಸಾಮಾನ್ಯರಂತೆ ಹಣ್ಣು-ಹಂಪಲು ಖರೀದಿ

ಮೈಸೂರು: ಭಾನುವಾರ ಬೆಳಿಗ್ಗೆ ನಗರದ ದೇವರಾಜ ಮಾರುಕಟ್ಟೆಗೆ ರಾಜವಂಶಸ್ಥ ಯದುವೀರ್, ಮಡದಿ ತ್ರಿಷಿಕಾ ಕುಮಾರಿ ಒಡೆಯರ್ ಸಮೇತ ಮಾರುಕಟ್ಟೆಗೆ ಭೇಟಿ ನೀಡಿ ಸಾಮಾನ್ಯರಂತೆ ಹಣ್ಣು-ಹಂಪಲು ಖರೀದಿ ಮಾಡಿದ್ದಾರೆ.

ಮಹಾರಾಜ ದಂಪತಿ ಭೇಟಿ ವ್ಯಾಪಾರಿಗಳಿಗೆ ಒಂದು ಕ್ಷಣ ಅಚ್ಚರಿ ತಂದಿತು. ಕೆಲವರು ಮಹಾರಾಜರ ಆಶೀರ್ವಾದ ಪಡೆದುಕೊಂಡರು. ಮಾರುಕಟ್ಟೆಯನ್ನು ಒಂದು ಸುತ್ತು ಹಾಕಿ ವ್ಯಾಪಾರಿಗಳ ಜತೆ ಸಮಾಲೋಚನೆ ನಡೆಸಿದರು. ದಂಪತಿ ಮಾರುಕಟ್ಟೆಯಲ್ಲಿ ಸಾಗುತ್ತಿದ್ದರೆ ವ್ಯಾಪಾರಿಗಳು ಸ್ವಪ್ರೇರಣೆಯಿಂದ ಎದ್ದು ನಿಂತು ಗೌರವ ತೋರಿಸಿದ್ದು ವಿಶೇಷವಾಗಿತ್ತು.

ಮಾರುಕಟ್ಟೆಯನ್ನು ಒಂದು ಸುತ್ತು ಹಾಕಿದ ಯದುವೀರ್ ದಂಪತಿ ನಂತರ ಮೈಸೂರು ಪಾಕ್, ನಂಜನಗೂಡು ಬಾಳೆಹಣ್ಣು , ನೇರಳೆ ಹಣ್ಣು, ಸೊಪ್ಪು ಹಾಗೂ ಮಾವಿನ ಹಣ್ಣು ಖರೀದಿ ಮಾಡಿದರು.

ಈ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾರಂಪರಿಕ ದೇವರಾಜ ಮಾರುಕಟ್ಟೆ ಕೆಡವಬೇಕು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ, ಹೈಕೋರ್ಟ್ ಆದೇಶವನ್ನು ಅವರು ತಪ್ಪಾಗಿ ಭಾವಿಸಿದ್ದಾರೆ.

ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ತಜ್ಞರು ಪರಿಶೀಲನೆ ನಡೆಸಿ ಇದನ್ನು ಸರಿಯಾದ ರೀತಿಯಲ್ಲಿ ಸರಿ ಪಡಿಸಿದರೆ ಇನ್ನೂ 100 ವರ್ಷಗಳ ಕಾಲ ಈ ದೇವರಾಜ ಮಾರುಕಟ್ಟೆ ಬಾಳುತ್ತದೆ ಎಂದು ಹೇಳಿದ್ದಾರೆ. ಆದರೆ ಮಹಾನಗರ ಪಾಲಿಕೆಯವರು ಕೋರ್ಟ್ ಆದೇಶದ ಬಗ್ಗೆ ಸರಿಯಾಗಿ ತಿಳಿಸುತ್ತಿಲ್ಲ.

ಸರ್ಕಾರಕ್ಕೆ ನಮ್ಮದೊಂದು ಮನವಿ ದೇವರಾಜ ಮಾರುಕಟ್ಟೆ ಮೈಸೂರಿನ ಗುರುತು ಇದ್ದಂತೆ. ಅರಮನೆಯ ಸುತ್ತ ಇರುವ ಪಾರಂಪರಿಕ ಕಟ್ಟಡಗಳಲ್ಲಿ ಇದೂ ಒಂದು. ಅದನ್ನು ಸಂರಕ್ಷಿಸಿ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ ನಾವು ಕೂಡ ಇವರ ಜೊತೆ ಇರುತ್ತೇವೆ. ‌ಈ ಕಟ್ಟಡದ ಬಗ್ಗೆ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೊ ಆ ನಂತರ ನಾವು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಪಾರಂಪರಿಕ ಕಟ್ಟಡಗಳ ಸಮಿತಿಯ ಸದಸ್ಯರು ಇಲ್ಲಿಗೆ ಬಂದು ನೋಡಿದರೆ, ನಾನು ಸಹ ಬರುತ್ತೇನೆ ಇದರ ಬಗ್ಗೆ ತಿಳಿಸಿಕೊಡುತ್ತೇನೆ . ದೇವರಾಜ ಮಾರುಕಟ್ಟೆಯ ನೆಲಸಮದ ಮುಂಚೆ ಪಾರಂಪರಿಕ ಕಟ್ಟಡಗಳ ಸಮಿತಿಯಲ್ಲಿ ಸರಿಯಾದ ವಾಸ್ತುಶಿಲ್ಪಿಗಳು ಇದ್ದರೆ ಇದನ್ನು ನೋಡಲಿ. ಆಮೇಲೆ ಅವರೇ ಈ ಕಟ್ಟಡವನ್ನು ಕೆಡಗುವುದು ಅಥವಾ ಮರು ಸ್ಥಾಪನೆ ಮಾಡಬಹುದಾ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿ ಎಂದರು.

Scroll to Top