ಕೈಯಲ್ಲಿ ಸೌಟು ಹಿಡಿಯುವುದರಿಂದ ಆಕಾಶದಲ್ಲಿ ವಿಮಾನವನ್ನೂ ಹಾರಿಸುವ ತಾಕತ್ತು ಮಹಿಳೆಯರಿಗಿದೆ: ತ್ರಿಶಿಕಾ ಕುಮಾರಿ ಒಡೆಯರ್

ಮೈಸೂರು: ಕೈಯಲ್ಲಿ ಸೌಟು ಹಿಡಿಯುವುದರಿಂದ ಆಕಾಶದಲ್ಲಿ ವಿಮಾನವನ್ನು ಹಾರಿಸುವ ಹಂತದವರೆಗೂ ತಲುಪುವ ತಾಕತ್ತು ಮಹಿಳೆಯರಿಗಿದೆ ಎಂದು ಮಹಾರಾಣಿ ತ್ರಿಶಿಕಾ ಕುಮಾರಿ ಒಡೆಯರ್ ಅವರು ಹೇಳಿದ್ದಾರೆ.

ಮೈಸೂರಿನ ಎಂಜಿ.ರಸ್ತೆಯಲ್ಲಿರುವ ತೇರಾಪಂಥ್ ಸಮುದಾಯ ಭವನದಲ್ಲಿ ಜೈನ ಶ್ವೇತಾಂಬರ ತೇರಾಪಂಥ್ ಮಹಿಳಾ ಮಂಡಲ್ ವತಿಯಿಂದ ಮಹಿಳೆಯನ್ನು ಪ್ರಬಲೀಕರಣಗೊಳಿಸಲು ಹಾಗು ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಜಾಗತಿಕವಾಗಿ ಎಲ್ಲ ಕ್ಷೇತ್ರಗಳಲ್ಲು ಮಹಿಳಾ ಸಬಲೀಕರಣ ಆಗಬೇಕಿದೆ. ಆಕೆ ಯಾರಿಗೂ ಕಮ್ಮಿ ಇಲ್ಲ ಪುರುಷನಿಗೆ ಸಮಾನವಾಗಿ ಪ್ರತಿ ಹಂತದಲ್ಲು ಸಾಧಿಸಬಲ್ಲಳು, ಕೈಯಲ್ಲಿ ಸೌಟನ್ನು ಹಿಡಿಯುದರಿಂದ ಆಕಾಶದಲ್ಲಿ ವಿಮಾನವನ್ನು ಹಾರಿಸುವ ಹಂತದವರೆಗೂ ತಲುಕುವ ತಾಕತ್ತು ಮಹಿಳೆಯರಿಗಿದೆ. ಎಂತಹ ಸಂಧಿಗ್ಧ ಪರಿಸ್ಥಿಯಲ್ಲು ಸವಾಲುಗಳನ್ನು ಸರಾಗವಾಗಿ ಸ್ವೀಕರಿಸುವ ಶಕ್ತಿ ಮಹಿಳೆಯದ್ದು ಎಂದು ಹೇಳಿದರು.

ಮೈಸೂರು ರಾಜಮಾತೆ ಕೆಂಪನಂಜಮ್ಮಣ್ಣಿ ಅವರು ಆಡಳಿತ ನಡೆಸಿ ಭೇಷ್ ಎನಿಸಿಕೊಂಡಿದ್ದರು. ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು. ಬಾಲಕಿಯರ ಶಾಲೆ ಆರಂಭಿಸಿದ ಕೀರ್ತಿಯೂ ಅವರಿಗೇ ಸಲ್ಲುತ್ತದೆ. ನಗರಾಭಿವೃದ್ಧಿ ಸಮಿತಿಯನ್ನು ರಚಿಸಿದ್ದಲ್ಲದೇ ವಾಣಿ ವಿಲಾಸ ನೀರು ಸರಬರಾಜು ಕೇಂದ್ರವನ್ನು ಆರಂಭಿಸಿದರು. ಶಿವನ ಸಮುದ್ರದಲ್ಲಿ ವಿದ್ಯುತ್ ಕೇಂದ್ರವನ್ನು ಕೂಡ ಸ್ಥಾಪಿಸಿದರು ಎಂದರು. ಮೈಸೂರು ರಾಮಮನೆತನ ಮಹಿಳೆಯರಿಂದಲೇ ಆರಂಭವಾಗಿದ್ದು, ರಾಜಮಾತೆ ಕೆಂಪರಾಜಮ್ಮಣ್ಣಿಯವರಿಂದ ಪ್ರಾರಂಭವಾದ ರಾಜಮನೆತನ ಇವತ್ತು ಈ ಮಟ್ಟಕ್ಕೆ ಬೆಳೆದಿದೆ ಎಂದರು.

ಕಾರ್ಯಾಗಾರದಲ್ಲಿ ಮಹಿಳೆಯ ಕುರಿತು ಒಂದು ಕಿರು ನಾಟಕ ಕೂಡ ಆಯೋಜಿಸಲಾಗಿತ್ತು. ನಾಟಕ ನೋಡಿ ತ್ರಿಶಿಕಾರವರು ಖುಷಿ ಪಟ್ಟರಲ್ಲದೇ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಇನ್ನು ಕಾರ್ಯಾಗಾರದಲ್ಲಿ 400 ಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು.

Leave a Comment

Scroll to Top