ಮೈಸೂರು: ನಗರದಾದ್ಯಂತ ಭಾನುವಾರ ರಾತ್ರಿಯಿಡೀ ಸುರಿದ ಮಳೆಗೆ ಇಲ್ಲಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಚಾವಣಿಯ ಒಂದು ಅಂಚು ಕುಸಿದಿದೆ. ನಾಡಹಬ್ಬಕ್ಕೆ ಕೆಲವೇ ದಿನಗಳಿದ್ದು ಬಿರುಸಿನ ಸಿದ್ಧತೆ ನಡೆಯುತ್ತಿರುವಾಗ ಹೀಗಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಸೋಮವಾರ ಬೆಳಿಗ್ಗೆ 9.30ರ ಅಂದಾಜಿಗೆ, ಸೆಸ್ಕ್ ಕಚೇರಿಯ ಹಿಂಬದಿ ಇರುವ ಶೌಚಾಲಯದ ಮೇಲಂತಸ್ತಿನ ಚಾವಣಿ ಕುಸಿದಿದ್ದು ಅರಮನೆಯ ಸಿಬ್ಬಂದಿ ಮಣ್ಣನ್ನು ತೆರವುಗೊಳಿಸಿದ್ದಾರೆ.
’ಅರಮನೆಯ ಚಾವಣಿ ಮತ್ತು ಗೋಡೆ ಕೆಲವೆಡೆ ಬಿರುಕು ಬಿಟ್ಟಿದ್ದು, ಅಲ್ಲೆಲ್ಲ ಪ್ಲಾಸ್ಟರ್ ಮಾಡಲಾಗಿದೆ. ಭಾನುವಾರ ಸುರಿದ ಮಳೆಯಿಂದಾಗಿ ಅರಮನೆಯ ಎಡಭಾಗದ ಚಾವಣಿಯಲ್ಲಿ ತ್ರಿಕೋನಾಕಾರದ ವಿನ್ಯಾಸ ಹೊಂದಿರುವಲ್ಲಿ ಒಂದು ಅಂಚು ಕುಸಿದಿದೆ‘ ಎಂದು ಅರಮನೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
’ನೂರು ವರ್ಷ ಹಳೆಯ ಕಟ್ಟಡ ಸುಮಾರು 147 ಅಡಿ ಎತ್ತರವಿದ್ದು, ದಿಢೀರನೆ ಮೇಲೆ ಹತ್ತಿ ದುರಸ್ತಿ ಕಾರ್ಯ ಮಾಡಲು ಸಾಧ್ಯವಿಲ್ಲ. ಕೆಲವು ತಿಂಗಳಿಂದ ಮಳೆ ಸುರಿಯುತ್ತಲೇ ಇರುವುದರಿಂದ ಕೆಲವೆಡೆ ಶೀತ ಹಿಡಿದಿರುತ್ತದೆ. ಏನಾದರೂ ಕಾಮಗಾರಿ ನಡೆಸಲು ಮುಂದಾದರೆ ಇನ್ನೂ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಅದ್ದರಿಂದ ತಜ್ಞರೊಂದಿಗೆ ಚರ್ಚಿಸಿ ಅಗತ್ಯ ರೂಪುರೇಷೆ ರಚಿಸಿ ಕ್ರಮಕೈಗೊಳ್ಳಬೇಕು‘ ಎಂದು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ತಿಳಿಸಿದರು.
Source: Prajavani