ಮೈಸೂರಿನಿಂದ ಮತ್ತಷ್ಟು ವಿಮಾನಗಳ ಸಂಚಾರ: ಜುಲೈ 19 ರಿಂದ ಕೊಚ್ಚಿ, ಗೋವಾ, ಹೈದರಾಬಾದ್‌ಗೆ ವಿಮಾನ ಸೇವೆ

ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕೊಚ್ಚಿ, ಗೋವಾ ಹಾಗೂ ಹೈದರಾಬಾದ್‌ಗೆ ಜುಲೈ 19ರಂದು ವಿಮಾನಯಾನ ಸಂಪರ್ಕ ಆರಂಭವಾಗಲಿದೆ.

‘ಉಡಾನ್ -3’ ಯೋಜನೆಯಡಿ ಕಡಿಮೆ ದರದಲ್ಲಿ ಪ್ರಯಾಣ ಸೌಲಭ್ಯ ಒದಗಿಸುವ ಯೋಜನೆಯಡಿ ಮೈಸೂರಿನಿಂದ ಮತ್ತಷ್ಟು ವಿಮಾನಗಳ ಸಂಚಾರ ಆರಂಭವಾಗುತ್ತಿದೆ. ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಈ ಸೇವೆ ಒದಗಿಸಲು ನಾಗರಿಕ ವಿಮಾನಯಾನ ಸಚಿವಾಲಯ ಜನವರಿಯಲ್ಲಿ ಅನುಮತಿ ನೀಡಿತ್ತು.

ಏರ್‌ ಇಂಡಿಯಾದ ಅಲಯನ್ಸ್‌ ಏರ್‌ ಸಂಸ್ಥೆ ಕಡಿಮೆ ದರದಲ್ಲಿ ಈ ಸೇವೆ ಒದಗಿಸಲಿದೆ. ಎಟಿಆರ್‌ 72 ಆಸನ ಗಳ ವಿಮಾನ ಕಾರ್ಯಾಚರಣೆ ನಡೆಸಲಿದೆ. ವಿಶೇಷವೆಂದರೆ ಒಂದೇ ವಿಮಾನ ದಿನವಿಡೀ ವಿವಿಧ ನಗರಗಳನ್ನು ಸಂಪರ್ಕಿಸಲಿದೆ.

ಈ ವಿಮಾನವು ಹೈದರಾಬಾದ್‌ನಿಂದ ಬೆಳಿಗ್ಗೆ 6.05ಕ್ಕೆ ಹೊರಟು ಮೈಸೂರಿಗೆ 7.50ಕ್ಕೆ ಬರಲಿದೆ. ಮೈಸೂರಿನಿಂದ ಬೆಳಿಗ್ಗೆ 8.15ಕ್ಕೆ ಹೊರಟು 9.45ಕ್ಕೆ ಕೊಚ್ಚಿ ತಲುಪುತ್ತದೆ. ಕೊಚ್ಚಿಯಿಂದ ಬೆಳಿಗ್ಗೆ 10.10ಕ್ಕೆ ಹೊರಟು 11.40ಕ್ಕೆ ಮೈಸೂರಿಗೆ ಬರಲಿದೆ. ಮೈಸೂರಿನಿಂದ ಮಧ್ಯಾಹ್ನ 12.10ಕ್ಕೆ ನಿರ್ಗಮಿಸಿ 1.05ಕ್ಕೆ ಬೆಂಗಳೂ ರಿಗೆ ತಲುಪುತ್ತದೆ. ಬೆಂಗಳೂರಿನಿಂದ ಮಧ್ಯಾಹ್ನ 1.50ಕ್ಕೆ ಹೊರಟು 2.50ಕ್ಕೆ ಮೈಸೂರಿಗೆ ಬರಲಿದೆ.

ಮೈಸೂರಿನಿಂದ ಮಧ್ಯಾಹ್ನ 3.20ಕ್ಕೆ ಹೊರಟು ಸಂಜೆ 4.50ಕ್ಕೆ ಗೋವಾಕ್ಕೆ ಬಂದಿಳಿಯಲಿದೆ. ಗೋವಾದಿಂದ ಸಂಜೆ 5.20ಕ್ಕೆ ನಿರ್ಗಮಿಸಿ ಮೈಸೂರಿಗೆ 6.50ಕ್ಕೆ ಬರಲಿದೆ. ಮೈಸೂರಿನಿಂದ ರಾತ್ರಿ 7.20ಕ್ಕೆ ಹೊರಟು 9.05ಕ್ಕೆ ಹೈದರಾಬಾದ್‌ ತಲುಪುತ್ತದೆ.

Scroll to Top