ಇಂದಿನಿಂದ ಇತಿಹಾಸ ಪ್ರಸಿದ್ದ ಮುಡುಕುತೊರೆ ಜಾತ್ರೆ

ಮುಡುಕುತೊರೆ ಜಾತ್ರೆ

ಮುಡುಕುತೊರೆ: ಇಂದಿನಿಂದ ಇತಿಹಾಸ ಪ್ರಸಿದ್ದ ಮುಡುಕುತೊರೆ ಜಾತ್ರೆ ಮಹೋತ್ಸವ ಆರಂಭಲಾಗಲಿದೆ. ದೈವೀಕೃಪೆ ಹೆಸರುವಾಸಿಯಾದ ಮತ್ತೊಂದು ಕ್ಷೇತ್ರವೇ ಶ್ರೀ ಮುಡುಕುತೊರೆ ಪುಣ್ಯ ಕ್ಷೇತ್ರ.

ಫೆ -7 ರಿಂದ 23 ವರೆಗೂ ಜಾತ್ರೆ ಕಾರ್ಯಕ್ರಮ ನಡೆಯಲಿದ್ದು ಪ್ರತಿ ದಿನ ಪೂಜೆ ಕೈಂಕರ್ಯಗಳು ನಡೆಯುತ್ತವೆ.

  • ಫೆ -7 ಅಂಕುರಾರ್ಪಣ
  • ಫೆ -8 ಧ್ವಜಾರೋಹಣ
  • ಫೆ -9 ಚಂದ್ರಮಂಡಲಾರೋಹಣ
  • ಫೆ -14 ಶ್ರೀಮದ್ಧಿವ್ಯ ಬ್ರಹ್ಮರಥೋತ್ಸವ
  • ಫೆ -17 ತೆಪ್ಪೋತ್ಸವ
  • ಫೆ -22 ಪರ್ವತ ಪರಿಷೆ ಕಾರ್ಯಕ್ರಮಗಳು ನಡೆಯುತ್ತವೆ.

ಶ್ರೀ ಭ್ರಮರಾಂಭ ಸಹಿತ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಗಳ ಸಮೂಹ ದೇವಸ್ಥಾನಗಳಿವೆ.ಬಲಕ್ಕೆ ನವಗ್ರಹ ದೇವಾಲಯ,ಹೊರಾಂಗಣದಲ್ಲಿ ಶ್ರೀ ಮಲೈ ಮಹದೇಶ್ವರ ಸ್ವಾಮಿ ಸನ್ನಿಧಿಯೂ ಇದೆ. ಇಲ್ಲಿ ಪ್ರತಿ ಫೆಬ್ರವರಿ ಮಾಹೆಯಲ್ಲಿ ಜಾತ್ರೆ ಮಹೋತ್ಸವ ನಡೆಯುತ್ತದೆ.ಜಾತ್ರೆಯೂ ಮೂರು ವಾರಗಳಿಗೂ ಹೆಚ್ಚು ನಡೆಯುತ್ತದೆ.ಇದು ರಾಸುಗಳ ಜಾತ್ರೆಯೂ ಹೌದು. ಈ ಜಾತ್ರೆಗೆ ಸಹಸ್ರಾರು ದನಗಳು ಆಗಮಿಸುತ್ತವೆ.ಜಾತ್ರೆಯಲ್ಲಿ ಭಾಗವಹಿಸಿದ ಉತ್ತಮ ರಾಸಿಗೆ ಬಹುಮಾನ ನೀಡಲಾಗುತ್ತದೆ.

ಮುಡುಕುತೊರೆ ಜಾತ್ರೆ

ಬ್ರಹ್ಮರಥೋತ್ಸವ:

ಪ್ರತಿವರ್ಷ ಮಾಘ ಮಾಸ ಶುದ್ಧ ನವಮಿ ರೋಹಿಣಿ ನಕ್ಷತ್ರದ ದಿನದಂದು ಶ್ರೀಮದ್ಧಿವ್ಯ ಬ್ರಹ್ಮರಥೋತ್ಸವ ನಡೆಯುತ್ತದೆ.ಗಣಪತಿ, ಸುಬ್ರಮಣ್ಯ ಮತ್ತು ಭ್ರಮರಾಂಭಿಕ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅಲಂಕೃತ 3 ರಥಗಳನ್ನು ರಥದ ಬೀದಿಯಲ್ಲಿ ಬ್ರಹ್ಮರಥೋತ್ಸವ ದಿನ ಮೆರವಣಿಗೆ ಮಾಡಲಾಗುತ್ತದೆ. ಅರಿಕೆ ಹೊತ್ತ ಭಕ್ತರು ಹಣ್ಣು-ಜವನವನ್ನು ರಥಗಳಿಗೆ ಎಸೆದು ಅರಿಕೆ ತೀರಿಸಿಕೊಳ್ಳುತ್ತಾರೆ.ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಪಾವನರಾಗುತ್ತಾರೆ.

ದೊಡ್ಡ ತೆಪ್ಪೋತ್ಸವ :

ಬ್ರಹ್ಮ ರಥೋತ್ಸವ ನಡೆದ 3 ದಿನಗಳ ನಂತರ ತ್ರಯೋದಶಿ ಪುನರ್ವಸು ನಕ್ಷತ್ರದ ದಿನದಂದು ದೊಡ್ಡ ತೆಪ್ಪೋತ್ಸವವು ಪಶ್ಚಿಮ ವಾಹಿನಿ ಕಾವೇರಿ ನದಿಯಲ್ಲಿ ನಡೆಯುತ್ತದೆ. ಆ ದಿನ ತೆಪ್ಪದಲ್ಲಿ ಶ್ರೀ ಭ್ರಮರಾಂಭ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಇಟ್ಟು ನದಿಯಲ್ಲಿ ಪ್ರದಕ್ಷಿಣೆ ಮಾಡಿಸಲಾಗುವುದು. ರುದ್ರಾಭಿಷೇಕ, ಸಹಸ್ರನಾಮ,ಇನ್ನಿತರ ಪೂಜಾ ಕೈಂಕರ್ಯ ನಡೆಯುತ್ತವೆ. ಈ ದಿನದಂದು ಪಕ್ಕದ ಮಾವಿನಹಳ್ಳಿ ಗ್ರಾಮದಿಂದ ತೆಪ್ಪದ ದೇವರ ಮೆರವಣಿಗೆ ತಂದು ತೆಪ್ಪೋತ್ಸವದಲ್ಲಿ ಹೆಚ್ಚು ಹೆಚ್ಚು ಜನರು ಭಾಗವಹಿಸುತ್ತಾರೆ.ತೆಪ್ಪೋತ್ಸವವು ರಾತ್ರಿಯ ವೇಳೆಯಲ್ಲಿ ನಡೆಯುವುದು ಮತ್ತೊಂದು ವಿಶೇಷ.ಇದನ್ನು ಕಣ್ಮನ ತುಂಬಿಕೊಳ್ಳಲು ಸಾವಿರಾರು ಭಕ್ತರು ತಂಡೋಪತಂಡವಾಗಿ ಆಗಮಿಸುವುದುಂಟು.

ಪರ್ವತ ಪರೀಷೆ (ಬಸವನ ಮಾಲೆ):

ರಥೋತ್ಸವ ತರುವಾಯ ಎಂಟನೇ ದಿನದಂದು ತೃತೀಯ ಹಸ್ತ ನಕ್ಷತ್ರದ ದಿನದಂದು ಪರ್ವತ ಪರೀಷೆ ನಡೆಯುತ್ತದೆ. ಈ ದಿನ ಕಾವೇರಿ ತೀರದಲ್ಲಿ ಬಸವಗಳನ್ನು ಪೂಜಿಸಿ ಓಟಕ್ಕೆ ಬಿಡಲಾಗುವುದು.ಇದರಲ್ಲಿ ಗೆದ್ದ ಬಸವನನ್ನು ಶ್ರೀ ಭ್ರಮರಾಂಭಿಕ ಸಮೇತ ಪೂಜೆಗೆಂದು ತಂದೆ ಮನೆ ಶ್ರೀಶೈಲಕ್ಕೆ ಕಳುಹಿಸಲಾಗುವುದೆಂದು ಪ್ರತೀತಿ.ಯುಗಾದಿ ದಿನದಂದು ಶ್ರೀಶೈಲದಲ್ಲಿ ಪೂಜೆ ಸಲ್ಲಿಸಿದ ಎರಡು ತಿಂಗಳ ನಂತರ ನಡೆಯುವ ಬಟ್ಟಲು ಪೂಜೆಗೆ ಅದೇ ಬಸವ ವಾಪಸ್ಸಾಗುವುದು ಪಾರಂಪರಿಕ ಆಚರಣೆಯಾಗಿದೆ.

ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಿಸಿ ಟಿವಿಯನ್ನು ಅಳವಡಿಸಲಾಗಿದೆ. ಜಾತ್ರೆಯಲ್ಲಿ ಅವರಣದಲ್ಲಿ ಹೊರ ಪೊಲೀಸ್ ಠಾಣೆಯೊಂದನ್ನು ಸ್ಥಾಪಿಸಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.

Scroll to Top