ಮೈಸೂರು-ಹೈದ್ರಾಬಾದ್‍ ನಡುವೆ ಮತ್ತೊಂದು ವಿಮಾನ ಸಂಚಾರ ಆರಂಭ

ಮೈಸೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ಸಂಸ್ಥೆ ಮೈಸೂರು-ಹೈದ್ರಾಬಾದ್ ನಡುವೆ ವಿಮಾನ ಸಂಚಾರ ಆರಂಭಿಸಿದೆ. ಈ ವಿಮಾನ ಸಂಚಾರ ಮೈಸೂರು-ಮಂಡಕಳ್ಳಿ ವಿಮಾನ ನಿಲ್ದಾಣದಿಂದ ರಾತ್ರಿ ಆರಂಭಗೊಂಡಿದೆ.

ಉಡಾನ್ ಯೋಜನೆಯಡಿ ಮೈಸೂರು ಮತ್ತು ಹೈದರಾಬಾದ್ ಅನ್ನು ಸಂಪರ್ಕಿಸುವ 2 ನೇ ವಿಮಾನ ಮೈಸೂರು -ಹೈದ್ರಾಬಾದ್ ಇಂಡಿಗೋ ವಿಮಾನಕ್ಕೆ ನಿನ್ನೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.

ಪ್ರತಿನಿತ್ಯ ಹೈದರಾಬಾದ್​ನಿಂದ ಸಂಜೆ 4.55ಕ್ಕೆ ಹೊರಟು 6.40ಕ್ಕೆ ಮೈಸೂರು ತಲುಪಲಿದೆ. ಹಾಗೇ ಮೈಸೂರಿನಿಂದ ಸಂಜೆ 7.40ಕ್ಕೆ ಹೊರಟು ರಾತ್ರಿ 9.15ಕ್ಕೆ ಹೈದರಾಬಾದ್​ ತಲುಪಲಿದೆ. ಪ್ರತಿ ಮಂಗಳವಾರ ಹೈದರಾಬಾದ್‌ನಿಂದ ಬೆಳಗ್ಗೆ 11.20ಕ್ಕೆ ಹೊರಟು ಮಧ್ಯಾಹ್ನ 1ಗಂಟೆಗೆ ಮೈಸೂರಿಗೆ ಬರಲಿದೆ. ಬಳಿಕ ಮಧ್ಯಾಹ್ನ 1.30ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 3.10ಸುಮಾರಿಗೆ ಹೈದರಾಬಾದ್​​ಗೆ ತಲುಪಲಿದೆ.

ಈ ವಿಮಾನದಲ್ಲಿ ಒಟ್ಟು 70 ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು ಟಿಕೆಟ್​ ದರ ಒಬ್ಬರಿಗೆ 2,650 ರೂಪಾಯಿ.

Scroll to Top