ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರ ಆಕರ್ಷಣೆಯಾಗಿದ್ದ, ಮೈಮೇಲೆ ರೋಮಗಳನ್ನು ಹೊಂದಿರದ ವಿಶೇಷ ಚಿಂಪಾಂಜಿ ಯೊಂದು ಸಾವನ್ನಪ್ಪಿದೆ.

27ವರ್ಷದ ಗುರು ಎಂಬ ಚಿಂಪಾಂಜಿ ನಿನ್ನೆ ರಾತ್ರಿ 9.30ಕ್ಕೆ ಮೃತಪಟ್ಟಿದೆ. ಕಳೆದ 16 ವರ್ಷಗಳಿಂದ ಮೃಗಾಲಯದಲ್ಲಿ ಪ್ರವಾಸಿಗರ ಆಕರ್ಷಣೆಯಾಗಿದ್ದ ಚಿಂಪಾಂಜಿ ಗುರು ಅನಾರೋಗ್ಯದಿಂದ ಮೃತಪಟ್ಟಿದೆ. ಡಿ.23 ರಂದು ಸಪ್ಪೆಯಾಗಿ ಕುಳಿತಿರುವುದನ್ನು ಗಮನಿಸಿದ ಮೃಗಾಲಯದ ವೈದ್ಯರು ಗುರುವನ್ನು ಆರೈಕೆ ಮಾಡಿ, ಚಿಕಿತ್ಸೆ ನೀಡಲು ಆರಂಭಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಗುರು ಸೋಮವಾರ ರಾತ್ರಿ ಮೃತಪಟ್ಟಿದೆ.
ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ತಜ್ಞ ಪಶುವೈದ್ಯರ ತಂಡ, ಪಶುರೋಗ ನಿರ್ಣಯ ತಜ್ಞರು ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಚಿಂಪಾಂಜಿಯು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿರುವುದಾಗಿ ಅವರು ಅಭಿಪ್ರಾಯಪಟ್ಟಿದ್ದು, ಮೃತ ಚಿಂಪಾಂಜಿಯ ವಿವಿಧ ಅಂಗಾಗಗಳ ಮಾದರಿಗಳನ್ನು ಹೆಚ್ಚಿನ ಅಧ್ಯಯನಕ್ಕಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇನ್ನು ಈ ಚಿಂಪಾಂಜಿಯನ್ನು ಚೆನ್ನೈನ ಅರಿಗ್ನಾರ್ ಅಣ್ಣ ಮೃಗಾಲಯದವರು ಸರ್ಕಸ್ ಕಂಪನಿಯಿಂದ ಸಂರಕ್ಷಿಸಿ ಮೈಸೂರು ಮೃಗಾಲಯಕ್ಕೆ 11-08-2003ರಲ್ಲಿ ಹಸ್ತಾಂತರಿಸಲಾಗಿತ್ತು. ಲಕ್ಷ್ಮಿ ಮತ್ತು ಜಮ್ಲು ಎಂಬ ಚಿಂಪಾಂಜಿ ಜೋಡಿಗೆ ಜನಿಸಿದ ‘ಗುರು’ ಮೈಮೇಲೆ ರೋಮಗಳನ್ನು ಹೊಂದಿರದ ವಿಶೇಷ ಚಿಂಪಾಂಜಿಯಾಗಿತ್ತು. ಸದ್ಯ ಮೃಗಾಲಯದಲ್ಲಿ ಮೂರು ಗಂಡು ಹಾಗೂ ಒಂದು ಹೆಣ್ಣು ಚಿಂಪಾಂಜಿ ಇದ್ದು, ಮೇಷನ್(25), ಕಿಮೋನಿ(15), ನಿಕೋಶನ್(20), ಗಂಗಾ(57) ಚಿಂಪಾಂಜಿಗಳು ಮೃಗಾಲಯದಲ್ಲಿದೆ.
ಗುರುವಿನ ನಿಧನಕ್ಕೆ ಮೃಗಾಲಯ ತಂಡ ಶ್ರದ್ಧಾಂಜಲಿ ಸಲ್ಲಿಸಿದೆ.
You must be logged in to post a comment.