ಮೈಸೂರು: ಏರ್ ಇಂಡಿಯಾ ಸಂಸ್ಥೆಯು, ಮೈಸೂರು–ಬೆಂಗಳೂರು ನಡುವೆ ಜೂನ್ 7ರಿಂದ ವಿಮಾನಯಾನ ಸೇವೆ ಆರಂಭಿಸಲಿದೆ.
ಕೇವಲ ಒಂದು ಗಂಟೆಯೊಳಗೇ ಬೆಂಗಳೂರಿನಿಂದ ಮೈಸೂರಿಗೆ ತೆರಳಲು ವಿಶೇಷ ವಿಮಾನ ಸೌಲಭ್ಯ ದೊರೆಯುತ್ತಿದೆ. ಮಂಗಳವಾರ ಹೊರತುಪಡಿಸಿ, ಉಳಿದೆಲ್ಲ ದಿನ ವಿಮಾನ ಹಾರಾಟ ನಡೆಸಲಿದೆ.
ಪ್ರತಿ ನಿತ್ಯ ಮಧ್ಯಾಹ್ನ 12 ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೊರಡುವ ಏರ್ ಇಂಡಿಯಾ ಎ1 9540 ಫ್ಲೈಟ್ 1 ಗಂಟೆಯಲ್ಲಿ ಅಂದರೆ ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪುತ್ತದೆ. ಅದೇ ರೀತಿ ಬೆ.10.30ಕ್ಕೆ ಬೆಂಗಳೂರಿನಿಂದ ಹೊರಡುವ ಎ1 9539 ಫ್ಲೈಟ್ 11.25ಕ್ಕೆ ಅಂದರೆ ಕೇವಲ 55 ನಿಮಿಷಗಳಲ್ಲಿ ಮೈಸೂರಿನ ವಿಮಾನ ನಿಲ್ದಾಣಕ್ಕೆ ತಲುಪುತ್ತದೆ.
ಇದರ ದರ 1,589 ರೂಪಾಯಿ ನಿಗದಿಗೊಳಿಸಲಾಗಿದೆ. ಇದೇ ರೀತಿ ವಾರದ ಪ್ರತಿದಿನವೂ ಟಿಕೆಟ್ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ.
‘ಉಡಾನ್-3’ ಯೋಜನೆಯಡಿ ಮೈಸೂರಿನಿಂದ ಪ್ರಮುಖ ನಗರಗಳಿಗೆ ಅಗ್ಗದ ವಿಮಾನಯಾನ ಸೇವೆ ಕಲ್ಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಮೈಸೂರು–ಚೆನ್ನೈ ಮಾರ್ಗದಲ್ಲಿ ಈಗಾಗಲೇ ಟ್ರೂಜೆಟ್ ಸಂಸ್ಥೆಯ ವಿಮಾನ ಕಾರ್ಯನಿರ್ವಹಿಸುತ್ತಿದೆ. ಮೈಸೂರಿನಿಂದ ಕೊಚ್ಚಿ, ಬೆಳಗಾವಿ, ಗೋವಾ ಮತ್ತು ಹೈದರಾಬಾದ್‌ಗೆ ವಿಮಾನ ಸೇವೆ ಕಲ್ಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.