ಮೈಸೂರು: ಮೈಸೂರನ್ನು ಮತ್ತೊಮ್ಮೆ ಸ್ವಚ್ಛನಗರಿಯನ್ನಾಗಿಸಲು ಹವಣಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆ ಇದೀಗ ನಾಗರಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಎಲ್‍ಇಡಿ ಡಿಸ್ಪ್ಲೇ ಬೋರ್ಡ್ ಗಳ ಮೊರೆ ಹೋಗಿದೆ.
ಎಲೆಕ್ಟ್ರಾನಿಕ್ ಎಲ್‍ಇಡಿ ವೀಡಿಯೋ ವಾಲ್ (ಎಲ್‍ಇಡಿ ಡಿಸ್ಪ್ಲೇ ಬೋರ್ಡ್) ಗಳ ಮೂಲಕ ಸ್ವಚ್ಛತೆ ಕಾಪಾಡುವ ಬಗ್ಗೆ ದೃಶ್ಯಾವಳಿಗಳನ್ನು ಪ್ರದರ್ಶಿಸಿ ಜನರಿಗೆ ಮನವರಿಕೆ ಮಾಡಲು ನಗರ ಪಾಲಿ ಕೆಯು ಪ್ರಯತ್ನಿಸುತ್ತಿದೆ.
ನಗರದ ಕೆಆರ್‍ಎಸ್ ರಸ್ತೆಯ ಒಂಟಿ ಕೊಪ್ಪಲು ಸರ್ಕಲ್, ರೈಲು ನಿಲ್ದಾಣ ಬಳಿ ಜಗಜೀವನ ರಾಮ್ ಸರ್ಕಲ್, ರಾಮಸ್ವಾಮಿ ಸರ್ಕಲ್, ಇಟ್ಟಿಗೆಗೂಡಿನ ಮೃಗಾಲಯದ ಎದುರು ಹಾಗೂ ಜಯಚಾಮರಾಜ ಒಡೆಯರ್ ಸರ್ಕಲ್ (ಹಾರ್ಡಿಂಗ್ ಸರ್ಕಲ್)ಗಳಲ್ಲಿ ಈ ಡಿಸ್ಪ್ಲೇ ಬೋರ್ಡ್‍ಗಳನ್ನು ಅಳವಡಿಸಲಾಗಿದೆ.
ಇಲ್ಲಿ ಸ್ವಚ್ಛತೆ ಕಾಪಾಡಲು ಅನುಸರಿಸಬೇಕಾದ ಕ್ರಮ, ಪಾಲಿಕೆಯಿಂದ ಕೈಗೊಂಡಿರುವ ಕ್ರಮ, ಪ್ಲಾಸ್ಟಿಕ್ ಬಳಕೆ ನಿಷೇಧ, ಒಣ ಹಾಗೂ ಹಸಿ ಕಸ ವಿಂಗಡಣೆ ವಿಧಾನ, ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಯಂತಹ ಅಂಶಗಳ ಬಗ್ಗೆ ಎಲ್‍ಇಡಿ ಡಿಸ್ಪ್ಲೇ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಗುತ್ತಿದೆ.
16.8×11.8 ಅಡಿ ಅಳತೆಯುಳ್ಳ ಈ ಎಲ್‍ಇಡಿ ಬೋರ್ಡ್ ನಲ್ಲಿ ಪ್ರತೀ ದಿನ ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಸಂಜೆ 5.30ರಿಂದ ರಾತ್ರಿ 10 ಗಂಟೆವರೆಗೆ ಸ್ವಚ್ಛತೆ ಕುರಿತ ಸಂದೇಶಗಳನ್ನೊತ್ತ ದೃಶ್ಯಾವಳಿಗಳು ಬಿತ್ತರಗೊಳ್ಳಲಿವೆ.