ಬೆಂಗಳೂರು: ಬೇಸಿಗೆ ಆರಂಭದ ದಿನಗಳಲ್ಲೇ ಅರಮನೆ ನಗರಿ ಮೈಸೂರು ಬಿಸಿಲ ಬೇಗೆಗೆ ಕೆಂಡವಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಾರ್ಚ್ ತಿಂಗಳ ಗರಿಷ್ಠ ತಾಪಮಾನ 37.9 ಡಿಗ್ರಿ ತಲುಪಿದೆ.
ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬೇಸಿಗೆ ಆರಂಭದಲ್ಲೇ ಬಿಸಿಲ ಝುಳ ಮೈಸುಡುತ್ತಿದ್ದು ಪರಿಣಾಮ ಜನರು ಹೈರಾಣಾಗಿದ್ದಾರೆ.
ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ:
ಮಾ.1 ರಂದು 33.7, 4ರಂದು 34.5, 5ರಂದು 35.8 ಹಾಗೂ 6ರಂದು 36.9 ಡಿ.ಸೆ. ದಾಖಲಾಗಿತ್ತು. ಮಾ.7ರ ಗುರುವಾರ ಮತ್ತಷ್ಟು ಏರಿಕೆ ಕಂಡ ತಾಪಮಾನ 37.9 ಡಿ.ಸೆ. ತಲುಪಿದೆ. ಈ ಹಿಂದೆ 2016ರ ಮಾ. 27ರಂದು ಗರಿಷ್ಠ ತಾಪಮಾನ 37.1 ಡಿ.ಸೆ. ದಾಖಲಾಗಿತ್ತು. ಇದರ ಹೊರತಾಗಿ 1931 ಮಾ.30ರಂದು 37.8 ಡಿ.ಸೆ. ದಾಖಲಾಗಿತ್ತೆಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದೆಲ್ಲೆಡೆ ಸುಡುಬಿಸಿಲು
ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬಿಸಿಗಾಳಿ (ಹೀಟ್ವೇವ್) ಮುಂದುವರಿದಿರುವುದರಿಂದಲೇ ರಾಜ್ಯದಲ್ಲೂ ಸುಡುಬಿಸಿಲು ಹೆಚ್ಚಾಗುತ್ತಿದೆ. ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 39 ಡಿ.ಸೆ. ತಲುಪಿದ್ದು, ಚಾಮರಾಜನಗರ, ಮಂಡ್ಯದಲ್ಲಿ ತಲಾ 38 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 37.7, ರಾಯಚೂರಿನಲ್ಲಿ 37, ಬೆಂಗಳೂರು ನಗರದಲ್ಲಿ 37, ಶಿವಮೊಗ್ಗದಲ್ಲಿ 37.4, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದಾವಣಗೆರೆ, ಹಾವೇರಿ, ಕೊಪ್ಪಳದಲ್ಲಿ ತಲಾ 36 ಡಿ.ಸೆ. ದಾಖಲಾಗಿದೆ.