ಮೈಸೂರು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತ, ಜಿಲ್ಲಾ ಪೊಲಿಸ್ ಅಧೀಕ್ಷಕ, ಪಾಲಿಕೆ ಆಯುಕ್ತರು ಲೈವ್’ನಲ್ಲಿ ನೀಡಿದ ಮುಖ್ಯ ಮಾಹಿತಿಗಳು

ಮೈಸೂರು: ಕೋವಿಡ್-19 ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಲಾಕ್‍ಡೌನ್ ಮುಂದುವರಿದಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳಾದ ಅಭಿರಾಮ್ ಜಿ.ಶಂಕರ್, ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ಪ, ಜಿಲ್ಲಾ ಪೊಲಿಸ್ ಅಧೀಕ್ಷಕರಾದ ಸಿ.ಬಿ.ರಿಷ್ಯಂತ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಅವರು ದಿನಾಂಕ: 3-5-2020 ರಂದು ಜಂಟಿಯಾಗಿ ವಾರ್ತಾ ಇಲಾಖೆಯ ಎಫ್.ಬಿ. ಪೇಜ್‍ನಲ್ಲಿ ನೀಡಿದ ಲೈವ್ ಸಂದೇಶದ ಮುಖ್ಯಾಂಶಗಳು:

 • ಮೈಸೂರು ಜಿಲ್ಲೆ ಇನ್ನೂ ರೆಡ್ ಜೋನ್‍ನಲ್ಲಿ ಇದ್ದು, ಇಡೀ ಜಿಲ್ಲೆಯನ್ನು ರೆಡ್ ಜೋನ್ ಎಂದೇ ಪರಿಗಣಿಸಬೇಕು. ಕೆಲವೊಂದು ಪ್ರದೇಶಗಳಿಗೆ ಮಾತ್ರ ರೆಡ್ ಜೋನ್ ಅನ್ವಯಿಸುತ್ತದೆ ಎಂದು ಭಾವಿಸಬಾರದು.
 • ನಗರ ಪ್ರದೇಶದಲ್ಲಿ ಅಗತ್ಯ ಸೇವೆಗಳ ಉತ್ಪಾದಕ ಕೈಗಾರಿಕೆಗಳಿಗೆ ಮಾತ್ರ ಅವಕಾಶವಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಕೈಗಾರಿಕೆಗಳೂ ಕಾರ್ಯನಿರ್ವಹಿಸಬಹುದು. ಈ ಸಂದರ್ಭದಲ್ಲಿ ಶೇ 33 ರಷ್ಟು ಸಿಬ್ಬಂದಿಗಳಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕ ಅಂತರ ಕಾಯ್ದುಕೊಳ್ಳುವುದನ್ನು ಸಂಸ್ಥೆಗಳ ಮುಖ್ಯಸ್ಥರು ಖಾತರಿಪಡಿಸಿಕೊಳ್ಳಬೇಕು.
 • ಖಾಸಗಿ ಕೈಗಾರಿಕೆಗಳು ತಮ್ಮ ಸಿಬ್ಬಂದಿಗಳಿಗೆ ನೀಡಿರುವ ಗುರುತಿನ ಚೀಟಿ ಇದ್ದರೆ ಸಾಕು. ಬೇರೆ ಯಾವುದೇ ಪಾಸ್ ಅಗತ್ಯವಿಲ್ಲ.
 • ಸ್ಥಳೀಯವಾಗಿ ಸಿಗುವ ಕಾರ್ಮಿಕರನ್ನು ಮಾತ್ರ ಬಳಸಿಕೊಂಡು ನಿರ್ಮಾಣ ಕೆಲಸಗಳನ್ನು ಮಾಡಬಹುದು. ಹಾರ್ಡ್‍ವೇರ್ ಅಂಗಡಿಗಳು, ಕಲ್ಲು, ಜಲ್ಲಿ, ಸಿಮೆಂಟ್ ಅಂಗಡಿಗಳು ತೆರೆಯಲು ಅವಕಾಶ ಮಾಡಲಾಗಿದೆ.
 • ಮೈಸೂರು ನಗರದ ವಾಣಿಜ್ಯ ಪ್ರದೇಶಗಳು ಹಾಗೂ ವಾಣಿಜ್ಯ ರಸ್ತೆಗಳಲ್ಲಿ ಅಗತ್ಯ ಸಾಮಗ್ರಿಗಳ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶವಿದೆ. ಜನವಸತಿ ಪ್ರದೇಶಗಳಲ್ಲಿ ಇರುವ ಎಲ್ಲಾ ಅಂಗಡಿಗಳು ತೆರೆಯಬಹುದು.
 • ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 91 ವಾಣಿಜ್ಯ ರಸ್ತೆಗಳನ್ನು ಗುರುತಿಸಲಾಗಿದೆ. ಈ ರಸ್ತೆಗಳಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿದೆ. ಇಲ್ಲಿ ಹಣ್ಣು, ತರಕಾರಿ, ಹಾಲು, ದಿನಸಿ, ಔಷಧಿ ಮುಂತಾದ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿದೆ. ಮದ್ಯ ಮಾರಾಟಕ್ಕೂ ಅವಕಾಶವಿದೆ. ಈ 91 ರಸ್ತೆಗಳ ವಿವರವನ್ನು ಮಾಧ್ಯಮಗಳ ಮೂಲಕ ಪ್ರಕಟಿಸಲಾಗುವುದು.
 • ಸ್ಪಾ, ಸಲೂನ್ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲ.
 • ಆಟೋರಿಕ್ಷಾ, ಟ್ಯಾಕ್ಷಿ ಸಂಚಾರಕ್ಕೆ ಅವಕಾಶ ಇಲ್ಲ.
 • ಸರ್ಕಾರದ ಆದೇಶದಂತೆ ಸಿಎಲ್2 ಮತ್ತು ಎಂ.ಎಸ್.ಐ.ಎಲ್.ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿದ್ದು, ಗ್ರಾಹಕರು ಅಲ್ಲಿ ಖರೀದಿಸಿ ತೆಗೆದುಕೊಂಡು ಹೋಗಬೇಕು.
 • ಮೈಸೂರಿನ ಬಿಗ್ ಬಜಾರ್, ಈಜಿ ಡೇ, ಮಾಲ್ ಆಫ್ ಮೈಸೂರಿನಲ್ಲಿ ಇರುವ ಮದ್ಯದ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ.
 • ಪಾನ್ ಮಸಾಲ, ಗುಟ್ಕಾ ಮಾರಾಟಕ್ಕೆ ಅವಕಾಶವಿದೆ. ಆದರೆ ಅವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸುವಂತಿಲ್ಲ.
 • ಅಂತರ ಜಿಲ್ಲೆ ಮತ್ತು ಅಂತಾರಾಜ್ಯ ಸಂಚಾರಕ್ಕೆ ಪಾಸ್ ವ್ಯವಸ್ಥೆ ಇದ್ದು, ಸೇವಾ ಸಿಂದು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಲಾಕ್‍ಡೌನ್‍ನಲ್ಲಿ ಸಿಲುಕಿಕೊಂಡ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮುಂತಾದವರಿಗೆ ತಮ್ಮ ಸ್ವಸ್ಥಾನಕ್ಕೆ ತೆರಳಲು ಒಂದು ಬಾರಿಗೆ, ಒಂದು ಕಡೆಗೆ ಮಾತ್ರ ಪಾಸ್ ಕೊಡುವ ವ್ಯವಸ್ಥೆ ಇದೆ.
 • ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವ ಎಲ್ಲರನ್ನೂ ಸ್ಕ್ರೀನಿಂಗ್ ಮಾಡಲಾಗುವುದು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದವರು ಕಡ್ಡಾಯವಾಗಿ 2 ವಾರಗಳ ಗೃಹಬಂಧನದಲ್ಲಿ(home quarantine)ಇರಬೇಕು.
 • ಅಂತಾರಾಜ್ಯ ಸಂಚಾರಕ್ಕೆ ಪಾಸ್ ನೀಡಲು ಸಿಂಗಲ್ ವಿಂಡೋ ವ್ಯವಸ್ಥೆ ಮಾಡಲು ಆಲೋಚಿಸಲಾಗುತ್ತಿದೆ. ಅಂತಾರಾಜ್ಯ ಪಾಸ್ ನೀಡಲು ಎರಡು ರಾಜ್ಯದವರು ಒಪ್ಪಬೇಕು.
 • ಮಧ್ಯಾಹ್ನ 12 ಗಂಟೆ ವರೆಗೆ ಸಾರ್ವಜನಿಕರು ಮುಕ್ತವಾಗಿ ಅಗತ್ಯ ಸೇವೆಗಳನ್ನು ಪಡೆಯಲು ಸಂಚರಿಸಬಹುದು. ಮಧ್ಯಾಹ್ನ 12ರ ನಂತರ ಸ್ವಯಂಪ್ರೇರಿತರಾಗಿ ಸಾಧ್ಯವಾದಷ್ಟು ಸಾರ್ವಜನಿಕರು ಸಂಚಾರ ಮಾಡಬಾರದು.
 • ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆ ವರೆಗೆ ಅಗತ್ಯ ಸೇವೆಗಳಿಗೆ ಮಾತ್ರ ಹೊರಬರಬೇಕು. ಲಾಕ್‍ಡೌನ್ ಸಡಿಲಿಕೆಯನ್ನು ಯಾರೂ ದುರುಪಯೋಗ ಮಾಡಿಕೊಳ್ಳಬಾರದು. ಅಗತ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು.
 • ಯಾವುದೇ ಸಂಸ್ಥೆಯು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಸಾರ್ವಜನಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರವಹಿಸುವುದು ಅಗತ್ಯ. ನಿರ್ಲಕ್ಷಿಸಿದರೆ ಪ್ರಕರಣ ದಾಖಲಿಸಲಾಗುವುದು.
 • ನಂಜನಗೂಡಿನಲ್ಲೂ ಸಹ ಕಂಟೈನ್‍ಮೆಂಟ್ ಪ್ರದೇಶಗಳಲ್ಲಿರುವ ಕೈಗಾರಿಕೆಗಳನ್ನು ಹೊರತುಪಡಿಸಿ, ಉಳಿದ ಕೈಗಾರಿಕೆಗಳನ್ನು ತೆರೆಯಲು ಅವಕಾಶವಿದೆ. ಆದರೆ ಕಂಟೈನ್‍ಮೆಂಟ್ ಜೋನ್‍ನಲ್ಲಿರುವ ಸಿಬ್ಬಂದಿಗಳು ಬರುವಂತಿಲ್ಲ.
Scroll to Top