ಚಕ್ರವ್ಯೂಹದಲ್ಲಿ ನರಹಂತಕ ಹುಲಿ ಹೆಡೆಮುರಿ ಕಟ್ಟಿದ ಅಭಿಮನ್ಯು!

ಮೈಸೂರು: ಬಂಡೀಪುರ ಸುತ್ತಮುತ್ತಲಿನಲ್ಲಿ ಭಯದ ವಾತಾವರಣ ಮೂಡಿಸಿ ಇಬ್ಬರನ್ನು ಬಲಿ ಪಡೆದ ನರಹಂತಕ ವ್ಯಾಘ್ರನನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆಯ ಹೆಮ್ಮೆಯ ಹೀರೋ ‘ಅಭಿಮನ್ಯು’ ಮತ್ತೊಮ್ಮೆ ಮಿಂಚಿದ್ದು, ಥೇಟ್‌ ಚಕ್ರವ್ಯೂಹದ ರೀತಿಯಲ್ಲೇ ಕಾರ್ಯಾಚರಣೆ ನಡೆದಿರುವುದು ವಿಶೇಷ. ಐದು ದಿನಗಳ ಕಾರ್ಯಾಚರಣೆಯ ನಿರ್ಣಾಯಕ ಘಟ್ಟ ಅತ್ಯಂತ ಅಪಾಯಕಾರಿ ಹಾಗೂ ರೋಚಕವಾಗಿತ್ತು. ಇಲ್ಲೂಅಭಿಮನ್ಯು ತನ್ನ ಪ್ರತಾಪ ತೋರಿದ್ದು, ಕುರುಕ್ಷೇತ್ರದ ಅಭಿಮನ್ಯುವಿನ ಸಾಹಸದಂತೆಯೇ ಅಚ್ಚರಿ ಮೂಡಿಸಿದ್ದಾನೆ. ಅಭಿಮನ್ಯು ಆನೆಯ ಚಾಣಾಕ್ಷ್ಯತನ, ವೀರಗಾಥೆ ಹಾಗೂ ನೂರಾರು ಸಿಬ್ಬಂದಿಯ ಶ್ರಮದಿಂದಾಗಿ ನರಹಂತಕನನ್ನು ಜೀವಂತವಾಗಿ ಸೆರೆ ಹಿಡಿಯಲಾಯಿತು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಚಕ್ರವ್ಯೂಹ: ಮಗುವಿನಹಳ್ಳಿಯ ಸಿದ್ದಿಕಿ ತೋಟದಲ್ಲಿ ನರಹಂತಕ ಹುಲಿ ಅಡಗಿರುವ ಸಾಧ್ಯತೆಯನ್ನು ಪತ್ತೆ ಹೆಚ್ಚಿದ ನಂತರ ಇಲಾಖಾಧಿಕಾರಿಗಳು ಕಾರ್ಯಾಚರಣೆಗೆ ಯೋಜನೆ ರೂಪಿಸಿದರು. ಅರಣ್ಯ ಮುಖ್ಯಾಧಿಕಾರಿ ಪುನಾಟಿ ಶ್ರೀಧರ್‌, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಬಾಲಚಂದ್ರ, ಪಶು ವೈದ್ಯಾಧಿಕಾರಿಗಳಾದ ಡಾ.ನಾಗರಾಜ್‌, ಡಾ. ಮುಜೀಬ್‌ ಹಾಗೂ ಇತರೆ ಅರಣ್ಯಾಧಿಕಾರಿಗಳು ಚಕ್ರವ್ಯೂಹವನ್ನು ನಿರ್ಮಿಸುವ ತೀರ್ಮಾನಕ್ಕೆ ಬಂದರು. ಹುಲಿ ಅಡಗಿರುವ ಜಾಗವನ್ನು ಏಳು ಆನೆಗಳೊಂದಿಗೆ ಹಲವು ತಂಡಗಳಲ್ಲಿ ಸುತ್ತುವರಿಯುವುದು. ನಂತರ ಒಂದು ಮಾರ್ಗದ ಮೂಲಕ ಅಭಿಮನ್ಯುವಿನ ನೇತೃತ್ವದಲ್ಲಿ ಹುಲಿ ಇರುವ ಪ್ರದೇಶಕ್ಕೆ ಮುನ್ನುಗ್ಗುವುದು. ಇದು ಕುರುಕ್ಷೇತ್ರದಲ್ಲಿನ ಚಕ್ರವ್ಯೂಹವನ್ನೇ ಹೋಲುವಂತಿತ್ತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಭಿಮನ್ಯು ಹೀರೋ: ಸೋಲಿಗರು, ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್‌ ಶ್ವಾನ ದಳದ ‘ರಾಣಾ’ ಸೇರಿದಂತೆ ಎಲ್ಲ ನೆರವನ್ನು ಅರಣ್ಯ ಇಲಾಖೆ ಪಡೆದುಕೊಂಡಿತು. ಹುಲಿಯ ವಾಸನೆ ಪತ್ತೆ ಹಚ್ಚುತ್ತಾ ಅಭಿಮನ್ಯು ಹಾಗೂ ಆತನ ಹಿಂದೆ ಗೋಪಾಲಸ್ವಾಮಿ ತೆರಳಿತು. ಹುಲಿ ಇರುವ ಪೊದೆಯನ್ನು ಗುರುತಿಸಿದ ಅಭಿಮನ್ಯು ದಾರಿಗೆ ಅಡ್ಡಲಾಗಿ ನಿಂತರೆ ಗೋಪಾಲಸ್ವಾಮಿ ಆನೆಯ ಮೇಲಿದ್ದ ಅಕ್ರಂಪಾಶ ಅರಿವಳಿಕೆ ಮದ್ದು ಹೊಡೆದರು. ಹುಲಿ ಅಲ್ಲಿಂದ ನೆಗೆದು ಮೊದಲೇ ಊಹಿಸಿದಂತೆ ಅಭಿಮನ್ಯು ಇದ್ದ ದಾರಿಯಲ್ಲಿ ಬಂತು. ಕೆಚ್ಚೆದೆಯ ಅಭಿಮನ್ಯು ಅದರ ಬಳಿ ಸಾಗುತ್ತಿದ್ದಂತೆ ಬೆನ್ನ ಮೇಲಿದ್ದ ವೆಂಕಟೇಶ್‌ ಮತ್ತೊಂದು ಚುಚ್ಚುಮದ್ದು ಹಾರಿಸಿ ಸೆರೆ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಂದಿನ ತುಂಟ ಇಂದು ಹೀರೋ!

ದೇಶದಲ್ಲಿಯೇ ಅತ್ಯಂತ ಧೈರ್ಯವಂತ ಆನೆಗಳ ಪೈಕಿ ಒಂದಾಗಿರುವ ಅಭಿಮನ್ಯು ಎಂದರೆ ಅರಣ್ಯ ಇಲಾಖೆಗೆ ಹೆಮ್ಮೆ. ಇಲಾಖೆ ಈತನನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದೆ. ಈತ ಒಂದು ಕಾಲದಲ್ಲಿ ಇಲಾಖೆ ಹಾಗೂ ಜನರಿಗೆ ತೊಂದರೆ ಕೊಟ್ಟವನು. ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಈತನನ್ನು ಆನೆಚೌಕೂರು ಬಳಿಯಲ್ಲಿ ಖೆಡ್ಡಕ್ಕೆ ಬೀಳಿಸಿ ಸೆರೆ ಹಿಡಿಯಲಾಯಿತು. ಅರಣ್ಯ ಇಲಾಖೆಯಲ್ಲಿ ಪಳಗಿದ. ಮಾವುತ ಸಣ್ಣಪ್ಪ ಈತನನ್ನು ಸರಿ ದಾರಿಗೆ ತಂದ. ಸಣ್ಣಪ್ಪನ ಪುತ್ರ ವಸಂತ ಹಾಗೂ ಅಭಿಮನ್ಯು ಒಟ್ಟಿಗೆ ಆಡಿ ಬೆಳೆದವರು. ಸಣ್ಣಪ್ಪನ ನಂತರ ಅಭಿಮನ್ಯುವಿಗೆ ವಸಂತನೇ ಮಾವುತ. ಅಭಿಮನ್ಯು ಹಾಗೂ ವಸಂತನನ್ನು ಆನೆ ಹಾಗೂ ಮಾವುತ ಎನ್ನುವುದಕ್ಕಿಂತ ಗೆಳೆಯರು ಎನ್ನಬಹುದು. ತನ್ನ ಬೆನ್ನ ಮೇಲೆ ವಸಂತ ಇದ್ದರೆ ಅಭಿಮನ್ಯು ಎಂತಹ ಕಾರ್ಯಾಚರಣೆಗೂ ಸೈ. ಯಾವುದೇ ಅಂಜಿಕೆ ಇಲ್ಲದೆ ಹುಲಿ, ಚಿರತೆ, ಪುಂಡಾನೆಗಳ ಸೆರೆಗೆ ಮುನ್ನುಗುತ್ತಾನೆ.

ಅಭಿಮನ್ಯುವಿನ ಸಾಹಸಗಾಥೆ ಒಂದೆರಡಲ್ಲ..!

ಮಹಾರಾಷ್ಟ್ರದ ಸಿಂಧೂ ದರ್ಗಾದಲ್ಲಿ ಸಲಗ ಸೆರೆ, ವೀರನಹೊಸಳ್ಳಿ ಬಳಿ ಕೆರೆಯಲ್ಲಿ ಸಿಲುಕಿದ್ದ ಗಂಡಾನೆ ರಕ್ಷಣೆ, ಕೇರಳದ ಬತ್ತೇರಿ ಮುತ್ತುಂಗದಲ್ಲಿ ಹುಲಿಸೆರೆ, ಮೇಟುಗುಪ್ಪೆಯಲ್ಲಿ ಹುಲಿ ಕಾರ್ಯಾಚರಣೆ, ಹಾಸನ ಜಿಲ್ಲೆಯ ಆಲೂರು ಎಸಳೂರಿನಲ್ಲಿ ಕಾಡಾನೆ ಸೆರೆ, ಚಾಮರಾಜನಗರ ಯಳಂದೂರಿನಲ್ಲಿ ಹುಲಿ ಸೆರೆ, ಕೆ.ಆರ್‌.ನಗರದಲ್ಲಿ ಪುಂಡಾನೆ ಸೆರೆ, ಮದ್ದೂರು ವಲಯದಲ್ಲಿ ಹುಲಿ ಕಾರ್ಯಾಚರಣೆ, ಕೊಳ್ಳೇಗಾಲದಲ್ಲಿ ಕಾಡಾನೆ ಸೆರೆ, ಪಿರಿಯಾಪಟ್ಟಣದಲ್ಲಿ ಪುಂಡಾನೆ ಸೆರೆ, ಪಾಲಿಬೆಟ್ಟ ಬಳಿ ಆನೆ ಸೆರೆ… ಹೀಗೆ ಸಾಕಷ್ಟು ಕಾರ್ಯಾಚರಣೆಯಲ್ಲಿ ಅಭಿಮನ್ಯು ಭಾಗವಹಿಸಿದ್ದಾನೆ.

ಕೃಪೆ: ವಿಜಯಕರ್ನಾಟಕ (ಐತಿಚಂಡ ರಮೇಶ್ ಉತ್ತಪ್ಪ)

Leave a Comment

Scroll to Top