
ಮೈಸೂರು: ಅಮೃತ ಯೋಜನೆಯಡಿ ನಗರದ ವಿಜಯನಗರದಲ್ಲಿರುವ ಮರು ನಿರ್ಮಾಣಗೊಂಡಿರುವ ರಾಜ್ಯದಲ್ಲೇ ಅತೀ ದೊಡ್ಡ ಜಲಸಂಗ್ರಹಗಾರ ಉದ್ಘಾಟನೆಗೆ ಸಿದ್ಧಗೊಳ್ಳಲಿದೆ.
ಕೇಂದ್ರ ಸರ್ಕಾರದ ಪುರಸ್ಕೃತ ಅಟಲ್ ನಗರ ಪುನರುಜ್ಜೀವನ ಅಭಿಯಾನ(ಅಮೃತ ಯೋಜನೆ) ಯೋಜನೆಯಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮೈಸೂರು ಮಹಾನಗರಪಾಲಿಕೆ ಜಂಟಿಯಾಗಿ 28ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿರುವ 2.70 ಕೋಟಿ ಲೀಟರ್(27 ಎಂಎಲ್) ಸಾಮರ್ಥ್ಯದ ಜಲ ಸಂಗ್ರಹಾರ ಜೂನ್ ೩೦ರಂದು ಉದ್ಘಾಟನೆಗೊಳ್ಳಲಿದೆ.

2.70 ಕೋಟಿ ಲೀಟರ್ ಸಾಮರ್ಥ್ಯದ ಜಲ ಸಂಗ್ರಹಾರ ಸಿದ್ದಗೊಂಡಿರುವುದು ಇಡೀ ರಾಜ್ಯದಲ್ಲೇ ಮೊದಲು ಎಂಬ ಖ್ಯಾತಿ ವಿಜಯನಗರ ಜಲ ಸಂಗ್ರಹಗಾರ ಪಾತ್ರವಾಗಿದೆ.
ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ನೀರು ಸಂಗ್ರಹಾಗಾರವನ್ನು 28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಮೈಸೂರು ಉತ್ತರ, ಪಶ್ವಿಮ ಭಾಗದ ಸುಮಾರು 20ಕ್ಕೂ ಹೆಚ್ಚು ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಿದೆ
ಟ್ಯಾಂಕ್ ನ ಸಂಗ್ರಹಣೆಯ ಸಾಮಾರ್ಥ್ಯ ನಾಲ್ಕು ಕೋಟಿ 30 ಲಕ್ಷ ಲೀಟರ್ ಇದೆ. ಇದರಿಂದ ವಿಜಯನಗರ, ಹೆಬ್ಬಾಳು, ಟಿ.ಕೆ.ಲೇಔಟ್, ಸರಸ್ವತಿಪುರಂ, ರಾಮಕೃಷ್ಣನಗರ ಭಾಗಕ್ಕೆಲ್ಲ ಅಭಾದಿತವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಅವಕಾಶವಾಗಲಿದೆ.
ವಿಜಯನಗರ 2ನೇ ಹಂತದ ಕೇಂದ್ರ ಜಲ ಸಂಗ್ರಹಾಗಾರ (ಸಿಎಸ್‌ಆರ್)ದಲ್ಲಿ ಈಗಾಗಲೇ ಇರುವ ಹಳೆಯ 18 ಎಂಎಲ್‌ನ ಒಂದು, 27 ಎಂಎಲ್ ಸಾಮರ್ಥ್ಯದ ಸಂಗ್ರಹಾಗಾರದ ಜತೆಗೆ ಹೆಚ್ಚುವರಿಯಾಗಿ 26 ಎಂಎಲ್‌ಡಿ ಸಾಮರ್ಥ್ಯದ ಸಂಗ್ರಹಾಗಾರ ಸದ್ಯವೇ ಚಾಲನೆಗೊಳ್ಳಲಿದೆ. ಶಿಥಿಲಗೊಂಡಿದ್ದ ಈ ಬೃಹತ್ ಜಲ ಸಂಗ್ರಹಾಗಾರವನ್ನು ಅಮೃತ್ ಯೋಜನೆಯಡಿ ಪುನರ್ ನಿರ್ಮಿಸಲಾಗಿದೆ.

ಈಗಾಗಲೇ ಈ ಯೋಜನೆಯಡಿ ವಿಜಯನಗರದಲ್ಲಿ ಜಲಸಂಗ್ರಹಾಗಾರಗಳ ದುರಸ್ತಿ, ಪುನರ್ ನಿರ್ಮಾಣ ಕಾರ್ಯ ನಡೆದಿದೆ. ಅಲ್ಲದೆ ಹೊಂಗಳ್ಳಿ 2 ಮತ್ತು 3ನೇ ಹಂತ, ಬೆಳಗೊಳ, ಮೇಳಾಪುರ ಮತ್ತು ಕಬಿನಿ ನೀರು ಸರಬರಾಜು ಯೋಜನೆಗಳ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ. ಕೊಳವೆ ಮಾರ್ಗ, ಪಂಪಿಂಗ್ ಮಷಿನ್ ಸರಬರಾಜು ಸೇರಿದೆ.
ಹೊಂಗಳ್ಳಿಯಲ್ಲಿ ಹೊಸದಾಗಿ ಪಂಪ್ ಮನೆ, ಪ್ಯಾನಲ್ ಕೊಠಡಿ ನಿರ್ಮಾಣ ಕಾರ್ಯ ನಡೆದಿದೆ. ಮೈಸೂರು ನಗರದ ಒಳ ಚರಂಡಿ ವ್ಯವಸ್ಥೆ ಅಭಿವೃದ್ಧಿಯನ್ನು ಇದೇ ಯೋಜನೆಯಡಿ ಕೈಗೊಳ್ಳಲಾಗಿದ್ದು, 77.68 ಕೋಟಿ ರೂ.ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ.