ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಹಾರಾಟ ಆರಂಭ

ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಹಾರಾಟ ಆರಂಭವಾಗಿದ್ದು, ಬೆಂಗಳೂರು-ಕಲಬುರ್ಗಿ-ಹೈದರಾಬಾದ್‌ಗೆ ಶುಕ್ರವಾರ ಬೆಳಿಗ್ಗೆ ಏರ್‌-72 ಏರ್‌ ಇಂಡಿಯಾ ಅಲಯನ್ಸ್‌ ವಿಮಾನ ಪ್ರಯಾಣ ಆರಂಭಿಸಿದೆ.

ಮೈಸೂರಿನಿಂದ 28 ಪ್ರಯಾಣಿಕರು ಟಿಕೇಟ್‌ ಕಾಯ್ದಿರಿಸಿದ್ದು, ಮೊದಲ ಪ್ರಯಾಣದಲ್ಲಿಯೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಆರ್‌.ಮಂಜುನಾಥ್‌ ತಿಳಿಸಿದ್ದಾರೆ.

ಇದೇ ವಿಮಾನ ಈ ಹಿಂದೆ ಮೈಸೂರು-ಕೊಚ್ಚಿ ನಡುವೆ ಪ್ರಯಾಣಿಸುತ್ತಿತ್ತು. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ರಿ ಕಾರ್ಪೆಟಿಂಗ್‌ ಕಾಮಗಾರಿ ನಡೆಯುತ್ತಿದೆ. ಮೈಸೂರು ಸೇರಿದಂತೆ ಕೆಲವು ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಹಾರಾಟವನ್ನು 2020ರ ಮಾರ್ಚ್ ತನಕ ರದ್ದುಪಡಿಸಲಾಗಿದೆ. ಅದಕ್ಕಾಗಿ ಇದೇ ವಿಮಾನ ಮೈಸೂರು-ಕೊಚ್ಚಿಯ ಬದಲಿಗೆ ಮೈಸೂರು-ಕಲಬುರ್ಗಿ ನಡುವೆ ಪ್ರಯಾಣ ಆರಂಭಿಸಿದೆ. ಈಗಾಗಲೇ ಮೈಸೂರಿನಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್‌ ಹಾಗೂ ಗೋವಾಕ್ಕೆ ನೇರ ವಿಮಾನ ಸಂಪರ್ಕವಿದೆ. ಇದೀಗ ಮತ್ತೊಂದು ಸೇವೆ ಸೇರ್ಪಡೆಯಾಗಿದೆ.

ಮೈಸೂರಿನಿಂದ ಕಲಬುರ್ಗಿಗೆ ವಿಮಾನ ಬೆಳಗ್ಗೆ 8.30ಕ್ಕೆ ಹೊರಡಬೇಕಿತ್ತು. ಮೊದಲ ದಿನದ ತಯಾರಿ ಪ್ರಕ್ರಿಯೆಯಿಂದಾಗಿ ಬೆಳಿಗ್ಗೆ 9 ಗಂಟೆಗೆ ತೆರಳಿದೆ. 70 ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಇರುವ ವಿಮಾನ ಉಡಾನ್‌ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಂಗಳವಾರ ಹೊರತುಪಡಿಸಿದಂತೆ ಈ ವಿಮಾನ ಬೆಳಿಗ್ಗೆ 8.30ಕ್ಕೆ ಮೈಸೂರಿನಿಂದ ಹೊರಟು 9.10ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ 9.50ಕ್ಕೆ ಹೊರಟು ಕಲಬುರ್ಗಿಗೆ 11.25ಕ್ಕೆ ತಲುಪಲಿದೆ.

ಕಲಬುರ್ಗಿಯಿಂದ ಬೆಳಿಗ್ಗೆ 11.50ಕ್ಕೆ ಹೊರಟು 1.30ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಟು 2.50ಕ್ಕೆ ಮೈಸೂರು ತಲುಪಲಿದೆ.

ಮಂಗಳವಾರ ಮೈಸೂರಿನಿಂದ ಬೆಳಗ್ಗೆ 10.25ಕ್ಕೆ ಹೊರಟು ಬೆಂಗಳೂರಿಗೆ 11.05ಕ್ಕೆ ಆಗಮಿಸಲಿದೆ. ಅಲ್ಲಿಂದ 11.40ಕ್ಕೆ ಹೊರಟು 1.20ಕ್ಕೆ ಕಲಬುರ್ಗಿಯಲ್ಲಿ ಇಳಿಯಲಿದೆ. ಕಲಬುರ್ಗಿಯಿಂದ 1.45ಕ್ಕೆ ಹೊರಟು ಬೆಂಗಳೂರಿಗೆ 3.25ಕ್ಕೆ ತಲುಪಲಿದೆ. ಅಲ್ಲಿಂದ 3.45ಕ್ಕೆ ಹೊರಟು ಮೈಸೂರಿಗೆ 4.40ಕ್ಕೆ ಆಗಮಿಸಲಿದೆ.

Scroll to Top