ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ: ರೋಗಿಗಳಿಗೆ ವರವಾಯ್ತು ‘ಮೆಡ್‌ ಆ್ಯಪ್’

ಮೈಸೂರು: ಕಳೆದ ಮೂರ್ನಾಲ್ಕು ವರ್ಷಗಳಿಂದ ಮೊಬೈಲ್‌ ಕ್ಲಿನಿಕ್‌ ಮೂಲಕ ರೋಗಿಗಳ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಮೈಸೂರು ನಗರದ ಹೆಲ್ತ್ ‌ಕೇರ್‌ ಸಂಸ್ಥೆಯೊಂದು ಕೊರೊನಾ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಆರಂಭಿಸಿದೆ.

ನುರಿತ ವೈದ್ಯರು ಮತ್ತು ಸಿಬ್ಬಂದಿಯ ಮೂಲಕ ಸೋಂಕಿತರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ನೀಡುವ ಮೂಲಕ ಗುಣಮುಖರನ್ನಾಗಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದೆ. ಕಳೆದ ಎರಡು ವಾರಗಳ ಹಿಂದೆ ಮೈಸೂರು ನಗರದ ಮೆಡ್‌ ಆ್ಯಪ್‌ ಹೆಲ್ತ್‌ ಕೇರ್‌ ಸರ್ವೀಸ್‌ ಸಂಸ್ಥೆ ಆರಂಭಿಸಿದ ಕೋವಿಡ್‌ ಚಿಕಿತ್ಸೆಯನ್ನು 150ಕ್ಕೂ ಹೆಚ್ಚು ಮಂದಿ ಪಡೆಯುವ ಮೂಲಕ ಗುಣಮುಖರಾಗುತ್ತಿದ್ದಾರೆ.

​ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ

ಕೊರೊನಾ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರಿಗೆ ಚಿಕಿತ್ಸೆ ನೀಡುವುದರೊಂದಿಗೆ ಸೋಂಕು ಇರುವುದು ದೃಢಪಟ್ಟ ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಕೊಂಡಿದೆ. ಅದಕ್ಕಾಗಿ ನುರಿತ ವೈದ್ಯರು ಮತ್ತು ಸಿಬ್ಬಂದಿಯನ್ನು ಮೆಡ್‌ ಆ್ಯಪ್‌ ಸಂಸ್ಥೆಯು ನಿಯೋಜಿಸಿಕೊಂಡಿದೆ. ಸೋಂಕಿನ ಲಕ್ಷಣಗಳಿರುವ ಅಥವಾ ಸೋಂಕು ಇರುವುದು ದೃಢಪಟ್ಟ ವ್ಯಕ್ತಿಯು ಸಂಸ್ಥೆಗೆ ಕರೆ ಮಾಡಿ, ಅಗತ್ಯ ವಿವರ ನೀಡಿ ನೋಂದಾಯಿಸಿಕೊಂಡರೆ ಆನ್‌ಲೈನ್‌ ಮೂಲಕ ವೈದ್ಯಕೀಯ ನೆರವು ನೀಡಲು ಆರಂಭಿಸಲಿದೆ.

​ಮಾಸ್ಕ್, ಸ್ಯಾನಿಟೈಸರ್, ವೈದ್ಯಕೀಯ ಉಪಕರಣ.. ಎಲ್ಲವೂ ಲಭ್ಯ

ರೋಗಿ ಅವಶ್ಯಕವಾಗಿ ಬಳಸುವ ಮಾಸ್ಕ್‌, ಸ್ಯಾನಿಟೈಸರ್‌, ಹ್ಯಾಂಡ್‌ ಗ್ಲೌಸ್‌ನೊಂದಿಗೆ ಪ್ರಾಥಮಿಕ ಆರೋಗ್ಯ ಪರೀಕ್ಷೆಯ ವೈದ್ಯಕೀಯ ಉಪಕರಣಗಳನ್ನು ಅಂಚೆ ಮೂಲಕ ಮನೆ ಬಾಗಿಲಿಗೆ ಕಳುಹಿಸಲಾಗುತ್ತದೆ. ಸಂಸ್ಥೆ ಸಿದ್ಧಪಡಿಸಿರುವ ಆ್ಯಪ್‌ನಿಂದ ಆಡಿಯೋ ಅಥವಾ ವಿಡಿಯೋ ಮೂಲಕ ರೋಗಿಯನ್ನು ಸಂಪರ್ಕಿಸುವ ವೈದ್ಯಕೀಯ ಸಿಬ್ಬಂದಿ, ರೋಗಿಯ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ಪಡೆದು ವೈದ್ಯರಿಗೆ ರವಾನಿಸುತ್ತಾರೆ. ಬಳಿಕ ಆ್ಯಪ್‌ ಮೂಲಕವೇ ರೋಗಿಗೆ ಅಗತ್ಯ ಮಾರ್ಗದರ್ಶನ ನೀಡಿ ಔಷಧ ನೀಡಲಿದ್ದಾರೆ. ಜತೆಗೆ ಆಹಾರ ಕ್ರಮ, ದೈಹಿಕ ವ್ಯಾಯಾಮ, ಯೋಗದ ಬಗ್ಗೆಯೂ ಪೂರಕ ಮಾಹಿತಿ ನೀಡಲಿದ್ದಾರೆ.

​ಮನೆ ಬಾಗಿಲಿಗೆ ಔಷಧ

ಟೆಲಿ ಕನ್ಸಲ್ಟೆಂಟ್‌ ಮೂಲಕ ರೋಗಿಗಳಿಗೆ ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಲಿದ್ದು, ಅಗತ್ಯ ಔಷಧವನ್ನು ಕೂಡ ಪೂರೈಕೆ ಮಾಡಲಾಗುತ್ತಿದೆ. ಜತೆಗೆ ವೈದ್ಯಕೀಯ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಕೊರೊನಾ ಪರೀಕ್ಷೆ ನಡೆಸಿ ವರದಿ ನೀಡಲಿದ್ದಾರೆ ಎನ್ನುತ್ತಾರೆ ಸಂಸ್ಥೆಯ ಹೋಂ ಐಸೋಲೇಷನ್‌, ಕ್ವಾರಂಟೈನ್‌ ಪ್ರಾಡಕ್ಟ್ ಹೆಡ್‌ ತೇಜಸ್‌ ಜಗನ್ನಾಥ್‌. ವಿದೇಶಗಳಲ್ಲಿ ಸಾಮಾನ್ಯವಾಗಿರುವ ಈ ವ್ಯವಸ್ಥೆಯನ್ನು ಮೈಸೂರಿನಲ್ಲಿಯೂ ಆರಂಭಿಸಲಾಗಿದ್ದು, ಕೊರೊನಾ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಸೋಂಕು ಬೇರೆಯವರಿಗೆ ಹರಡದಂತೆ ಎಚ್ಚರಿಕೆ ವಹಿಸಬಹುದು ಎನ್ನುತ್ತಾರೆ, ತೇಜಸ್‌ ಜಗನ್ನಾಥ್‌

​ರೋಗಿಗಳಿಗೆ ವರವಾಯ್ತು ಮೆಡ್‌ ಆ್ಯಪ್

ಈಗ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ ಅವರಿಗೆಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಹೊಸ ಸೇವೆಯನ್ನು ನುರಿತ ವೈದ್ಯರು ಮತ್ತು ಸಿಬ್ಬಂದಿ ಮೂಲಕ ಆರಂಭಿಸಿದ್ದೇವೆ ಎಂದು ಮೆಡ್‌ ಆ್ಯಪ್‌ ಸಂಸ್ಥೆ ಸಿಇಒ ನಿರಂಜನ್‌ ಹೇಳುತ್ತಾರೆ.

Source: Vijaya karntaka

Leave a Comment

Scroll to Top