ಮೈಸೂರು: ಮೈಸೂರಿನಲ್ಲಿ ಶುಕ್ರವಾರದಿಂದ ರಾತ್ರಿ 8 ಗಂಟೆ ಬದಲು ಸಂಜೆ 6 ರಿಂದಲೇ ವ್ಯಾಪಾರ ವಹಿವಾಟುಗಳ ಬಂದ್ ಮಾಡಬೇಕು. 6 ಗಂಟೆ ನಂತರ ಜನ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಜೊತೆಗಿನ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೋವಿಡ್ ನಿಯಂತ್ರಣ ಮಾಡಲು ಮೈಸೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜನರ ಓಡಾಟ ನಿಯಂತ್ರಣ ಮಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ರಾತ್ರಿ 8 ಗಂಟೆಯ ನಂತರ ಜಾರಿಯಲ್ಲಿರುವ ಕರ್ಫ್ಯೂವನ್ನ ಸಂಜೆ 6 ಗಂಟೆಯಿಂದಲೇ ಜಾರಿಯಾಗಲಿದೆ. ಶುಕ್ರವಾರದಿಂದಲೇ ಈ ಆದೇಶ ಜಾರಿಯಾಗಲಿದೆ ಎಂದರು.
ಅಲ್ಲದೆ ಶುಕ್ರವಾರದಿಂದ ಮಾಸ್ಕ್ ಧರಿಸದಿದ್ರೆ 200ರೂ ದಂಡ. ಗ್ರಾಮಾಂತರ ಭಾಗದಲ್ಲಿ 100ರೂ ದಂಡ. ಎಲ್ಲ ಎಪಿಎಂಸಿ ಹಾಗೂ ಮಾರುಕಟ್ಟೆಗಳಿಗು ಈ ಕಾನೂನು ಅನ್ವಯವಾಗಲಿದೆ. ಪಾಲಿಕೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ.
ಮೈಸೂರಿನಲ್ಲಿ ಕೋವಿಡ್ ಆಸ್ಪತ್ರೆಗೆ ನರ್ಸ್ ಹಾಗೂ ಡಿ ಗ್ರೂಪ್ ನೌಕರರ ಕೊರತೆ ಇದೆ. ಈ ಬಗ್ಗೆ ಜಿಲ್ಲಾಧಿಕಾರಿ ನನ್ನ ಗಮನಕ್ಕೆ ತಂದಿದ್ದಾರೆ. ಶಾಸಕ ರಾಮದಾಸ್ ಕೂಡ ಬೆಂಗಳೂರಿನಲ್ಲಿ ಸಚಿವರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಎರಡು ಮೂರು ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.