ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಬಹಳ ಜೋರಾಗಿಯೇ ನಡೆಯಿತು. ಈ ಸಂಭ್ರಮದ ನಡುವೆ ಪೊಲೀಸರು ಸಹ ಇನ್ನೂ ವಿನೂತನವಾಗಿ ಆಚರಿಸಿದರು. ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸುವ ಸಾರ್ವಜನಿಕರಿಗೆ ಮೈಸೂರು ಪೊಲೀಸರು ಗ್ರೀಟಿಂಗ್ ಕಾರ್ಡ್, ನೆನಪಿನ ಕಾಣಿಕೆ, ರೋಸ್ ನೀಡಿ ಲಡ್ಡು ಕೊಟ್ಟು ವಿಶೇಷವಾಗಿ ಆಚರಿಸಿದರು.
ಹೌದು ಇದೇ ಮೊದಲ ಬಾರಿಗೆ ಹೊಸ ವರ್ಷವನ್ನು ಮೈಸೂರು ಪೊಲೀಸರು ವಿಶೇಷವಾಗಿ ಆಚರಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಪೊಲೀಸರು ನಿಂತು ನಿಯಮ ಪಾಲಿಸುವ ವಾಹನ ಸವಾರರನ್ನು ನಿಲ್ಲಿಸಿ ಅವರುಗಳಿಗೆ ಶುಭಾಶಯ ಕೋರಿದರು. ನಂತರ ಶುಭಾಶಯ ಪತ್ರ, ನೆನಪಿನ ಕಾಣಿಕೆ, ಲಡ್ಡು ಹಾಗೂ ರೋಸ್ ಶುಭ ಹಾರೈಸಿದುದು ವಿಶೇಷವಾಗಿತ್ತು. ಪ್ರತಿ ದಿನ ಸಂಚಾರ ನಿಯಮ ಉಲ್ಲಂಘಿಸದೆ ವಾಹನ ಚಲಾಸುವಂತೆ ಜನರಿಗೆ ತಿಳುವಳಿಕೆ ನೀಡಿದರು.
ಇನ್ನು ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್, ಈ ವಿನೂತನ ಕಾರ್ಯಕ್ರಮ ವನ್ನು ಆಯೋಜಿಸಿ ಜನರ ಪ್ರೀತಿ ಗಳಿಸುವ ಮೂಲಕ ಮೈಸೂರು ನಗರದಲ್ಲಿ ಸುರಕ್ಷಾ ಸಂಚಾರ ವ್ಯವಸ್ಥೆ ಜಾರಿಗೆ ಪ್ರಯತ್ನಿಸಿದ್ದಾರೆ. ಸಂಚಾರ ನಿಯಮ ಪಾಲನೆ ಮಾಡುವುದರಿಂದ ನಿಮಗೆ, ನಿಮ್ಮ ಕುಟುಂಬದವರಿಗೆ ಮತ್ತು ಇತರರಿಗೂ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮನದಟ್ಟು ಮಾಡಿದರು.
ಇಷ್ಟು ದಿನ ಸಂಚಾರಿ ನಿಯಮ ಉಲ್ಲಂಘಿಸುವವರನ್ನು ತಡೆದು ದಂಡ ವಿಧಿಸುತ್ತಿದ್ದ ಪೊಲೀಸರು ನಿಯಮ ಪಾಲಿಸುವ ಮಂದಿಯನ್ನು ತಡೆದು ಸಿಹಿ ನೀಡಿ ಗಿಫ್ಟ್ ಕೊಟ್ಟು ಶುಭ ಕೋರಿದುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.