ಮೈಸೂರು: ಸಾಂಸ್ಕೃತಿಕ ನಗರಿ ಎಂದೇ ಕರೆಯುವ ಮೈಸೂರು ಮತ್ತೊಂದು ಗಿನ್ನಿಸ್ ದಾಖಲೆ ಮಾಡಲು ಸಜ್ಜಾಗಿದೆ. ಬೃಹತ್ ಜನರೊಂದಿಗೆ ಯೋಗ ಪ್ರದರ್ಶನ ಮಾಡುವ ಮೂಲಕ ದಾಖಲೆ ಬರೆಯಲು ನಗರ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದೇ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಗರದ ಕುವೆಂಪುನಗರ ಸೌಗಂಧಿಕಾ ಉದ್ಯಾನವನದಲ್ಲಿ 1.5 ಲಕ್ಷ ಯೋಗ ಪಟುಗಳು ಭಾಗಿಯಾಗುವ ಮೂಲಕ ದಾಖಲೆ ನಿರ್ಮಿಸುವ ಸಾಧ್ಯತೆಯಿದೆ.
ಈಗಾಗಲೇ ನೂರಾರು ಯೋಗ ಪಟುಗಳು ಉದ್ಯಾನವನದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ ಐದು ಭಾನುವಾರಗಳು ನಗರದ ವಿವಿಧೆಡೆ ಯೋಗ ಪಟುಗಳು ಯೋಗಭ್ಯಾಸದ ಬಗ್ಗೆ ಅರಿವು ಮೂಡಿಸಲಿದ್ದಾರೆ.
ಇದಕ್ಕೂ ಮೊದಲು 2017ರಲ್ಲಿ 55,506 ಯೋಗ ಪಟುಗಳು ಯೋಗ ಪ್ರದರ್ಶನ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು. ಆದರೆ ಕಳೆದ ಬಾರಿ ಮತ್ತೊಮ್ಮೆ ದಾಖಲೆ ಮಾಡುವ ಪ್ರಯತ್ನ ಫಲಿಸಲಿಲ್ಲ. ಕಳೆದ ವರ್ಷ ರಾಜಸ್ಥಾನದಲ್ಲಿ ಬಾಬಾ ರಾಮ್‌ದೇವ್ ಪತಾಂಜಲಿ ಯೋಗ ಸಂಸ್ಥೆಯ 1,00,974 ಯೋಗ ಪಟುಗಳು ಮಾಡಿದ ದಾಖಲೆಯನ್ನು ಮುರಿಯಲು ಈ ಬಾರಿ ಇನ್ನೂ ಹೆಚ್ಚಿನ ಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ದಾಖಲೆ ನಿರ್ಮಿಸುವ ಗುರಿ ಇಟ್ಟುಕೊಳ್ಳಲಾಗಿದೆ.