ಮೈಸೂರಿನಲ್ಲಿ 600ಕ್ಕೂ ಹೆಚ್ಚು ಬೆಡ್’ಗಳ ಕೋವಿಡ್ ಕೇರ್ ಸೆಂಟರ್ ಸಿದ್ಧ

ಮೈಸೂರು: ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಈ ಹಿನ್ನೆಲೆ ನಗರದ ಹೊರವಲಯದ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನೂತನ ಕಟ್ಟಡ ಅಕಾಡೆಮಿಕ್ ಭವನದಲ್ಲಿ 600ಕ್ಕೂ ಹೆಚ್ಚು ಬೆಡ್’ಗಳ ಕೋವಿಡ್ ಕೇರ್ ಸೆಂಟರ್‌ ಸ್ಥಾಪಿಸಲಾಗಿದೆ.

ಕೆಎಸ್ಒಯು ಅಕಾಡೆಮಿಕ್ ಭವನದಲ್ಲಿಯ ನೂತನ ಕೋವಿಡ್ ಕೇರ್ ಸೆಂಟರ್’ಗೆ ಮೈಸೂರು‌ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.‌ ಸೋಮಶೇಖರ್ & ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಸಚಿವ ಎಸ್. ಟಿ.‌ ಸೋಮಶೇಖರ್ ಕೆಎಸ್ಒಯು ಅಕಾಡೆಮಿಕ್ ಭವನದ ನೂತನ ಕಟ್ಟಡವನ್ನ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಇಲ್ಲಿ 55 ರೂಂ ಇದ್ದು, 600 ಬೆಡ್’ಗಳ ವ್ಯವಸ್ಥೆ ಇದೆ. ಕೋವಿಡ್ ಚಿಕಿತ್ಸೆಗಾಗಿ 4 ಅಂತಸ್ತಿನ ಕಟ್ಟಡ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇಲ್ಲಿ ‘ಎ’ ಸಿಮ್ಟಮೆಟಿಕ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

ಸ್ನಾನದ ಕೊಠಡಿ, ಶೌಚಾಲಯ, ಬಟ್ಟೆ ಸ್ವಚ್ಛಗೊಳಿಸಲು ಬೇಕಾದ ವ್ಯವಸ್ಥೆ ಇದೆ. ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇದೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪ್ರತ್ಯೇಕ ವಿಭಾಗ, ಆಡಳಿತ ವಿಭಾಗವನ್ನು ಈ ಕೇಂದ್ರದಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ.

ಇಲ್ಲಿ ಎಲ್ಲಾ ಮೂಲ ಸೌಕರ್ಯ ಒದಗಿಸಲಾಗಿದೆ. ಒಂದೆರೆಡು ದಿನದಲ್ಲಿ ಸಂಪೂರ್ಣ ಸಿದ್ಧವಾಗಲಿದೆ. ಪ್ರತಿ ಕೊಠಡಿಗೆ ಟಿ.ವಿ. ಕೇಬಲ್ ಸಂಪರ್ಕ, ಇಂಟರ್ನೆಟ್ ಸಂಪರ್ಕ, ವೈಫೈ ವ್ಯವಸ್ಥೆ ಇದೆ ಎಂದರು.

Scroll to Top