
ಮೈಸೂರು: ಮಂಗಳಮುಖಿಯರನ್ನು ಕೀಳಾಗಿ ನೋಡೋರೇ ಹೆಚ್ಚು. ಅವರು ಹತ್ತಿರ ಬರುತ್ತಿದ್ದಂತೆಯೇ ಪುಡಿಗಾಸು ನೀಡಿ ಕೆಲವರು ಸುಮ್ಮನಾಗ್ತಾರೆ. ಮತ್ತೆ ಕೆಲವರು ಚೀ ಥೂ ಎನ್ನುತ್ತಾ ಅಸಹ್ಯವಾಗಿ ಕಾಣುತ್ತಾರೆ. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಬ್ಬ ಮಂಗಳಮುಖಿ ಇದ್ದಾರೆ. ಅವರು ಎಲ್ಲರಿಗಿಂತಾ ಭಿನ್ನ!
ತಂದೆ ಇಲ್ಲದ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಸಾಕುತ್ತಿದ್ದಾರೆ ಈ ಮಾತೃ ಸ್ವರೂಪಿ ಮಂಗಳಮುಖಿ. ಇವರ ಹೆಸರು ಎಂ. ಡಿ. ಅಕ್ರಂ. ಭಿಕ್ಷೆ ಬೇಡಿ ಬಂದ ಹಣದಿಂದ ಇಬ್ಬರು ಬಾಲಕಿಯರನ್ನು ಸಾಕುತ್ತಿದ್ದಾರೆ. ಬಾಲಕಿಯರು ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ತಯಾರು ಮಾಡಿದ್ದಾರೆ!
ಮೈಸೂರಿನ ರಾಜೀವ ನಗರ ನಿವಾಸಿಯಾಗಿರುವ ಮಂಗಳಮುಖಿ ಎಂ. ಡಿ. ಅಕ್ರಂ ಅವರಿಗೆ, ಜೀವನ ನಡೆಸೋದೇ ಕಷ್ಟ ಕಷ್ಟ. ಇಂಥಾ ಸ್ಥಿತಿಯಲ್ಲೂ ಮಕ್ಕಳ ಬಗ್ಗೆ ವಿಶೇಷ ಕಾಳಜಿ. ಅಕ್ರಂ ಸಹೋದರನ ಮಗಳು ಅಸ್ತಾ ಬಾನು ಎಂಬವರಿಗೆ 14 ವರ್ಷಗಳ ಹಿಂದೆ ವಿವಾಹವಾಗಿತ್ತು. ನಾಲ್ಕು ಮಕ್ಕಳಾದ ಬಳಿಕ ಅಸ್ತಾ ಬಾನು ಅವರ ಪತಿ ಕ್ಷುಲ್ಲಕ ಕಾರಣಕ್ಕಾಗಿ ವಿಚ್ಛೇದನ ನೀಡಿ ಹೊರಟು ಹೋದ. ಆಗ ಸಹೋದರಿಯ ನೆರವಿಗೆ ಧಾವಿಸಿ ಬಂದವರೇ ಮಂಗಳಮುಖಿ ಅಕ್ರಂ. ಅಸ್ತಾ ಬಾನು ಹಾಗೂ ಆಕೆಯ ನಾಲ್ಕು ಮಕ್ಕಳನ್ನು ಸಾಕುವ ಹೊಣೆಯನ್ನು ಅಕ್ರಂ ಹೊತ್ತರು.
ಭಿಕ್ಷೆ ಬೇಡಿ ಬಾಲಕಿಯರನ್ನ ಬಾಕ್ಸರ್ ಮಾಡಿದ ಮಂಗಳಮುಖಿ..!
— Mysuruonline (@mysuruonline) November 6, 2019
ಸಹೃದಯಿ ದಾನಿಗಳ ನೆರವು ಸಿಗುವ ನಿರೀಕ್ಷೆ
Article Link: ? https://t.co/2GiE0zEfzW #Mysuru #Mysore @BSYBJP @VSOMANNA_BJP @mepratap pic.twitter.com/WKKjZPxZQ3
ತಮ್ಮ ಸಹೋದರಿಯ ಸಾಕುವ ಹೊಣೆ ಹೊತ್ತಿದ್ದಲ್ಲದೆ, ಆಕೆಯ ನಾಲ್ಕು ಮಕ್ಕಳ ಶಾಲಾ ಶುಲ್ಕ ಸೇರಿದಂತೆ ಇನ್ನಿತರ ಎಲ್ಲಾ ಖರ್ಚು ವೆಚ್ಚಗಳ ಭಾರವೂ ಮಂಗಳಮುಖಿ ಅಕ್ರಂ ಅವರೇ ಹೆಗಲೇರಿತು. ಅಸ್ತಾ ಬಾನು ಕುಟುಂಬಕ್ಕೆ ಮೈಸೂರಿನ ಗಾಯತ್ರಿಪುರಂನಲ್ಲಿ ಬಾಡಿಗೆ ಮನೆ ಮಾಡಿ ಇರಿಸಿದರು. ಆಕೆಯ ಇಬ್ಬರು ಹೆಣ್ಣು ಮಕ್ಕಳು ಓದಿ ವಿದ್ಯಾವಂತರಾಗಬೇಕೆಂದು ಫಾತಿಮ ಹಾಗೂ ಹಾಜಿರಾರನ್ನು ಶಾಲೆಗೆ ಸೇರಿಸಿದರು. ಭಿಕ್ಷೆ ಬೇಡಿ ಬಂದ ಹಣದಲ್ಲೇ ಈ ಮಕ್ಕಳ ಶಿಕ್ಷಣಕ್ಕೆ ನೆರವಾದರು.
ಇದೀಗ ಫಾತಿಮಾ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಹಾಜಿರ 6ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಕ್ಕಳಿಗೆ ಕೇವಲ ಶಿಕ್ಷಣ ಕೊಡಿಸಿದರೆ ಸಾಲದು, ಅವರು ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಮಂಗಳಮುಖಿ ಅಕ್ರಂ ಆಸೆಪಟ್ಟರು. ಪರಿಚಯಸ್ಥರ ಸಲಹೆ ಪಡೆದು ಮಕ್ಕಳನ್ನು ಬಾಕ್ಸಿಂಗ್ ಶಾಲೆಗೆ ಸೇರಿಸಿದರು. 6 ತಿಂಗಳ ಹಿಂದೆ ಬಾಕ್ಸಿಂಗ್ ಶಾಲೆಗೆ ಸೇರಿದ್ದ ಮಕ್ಕಳು, ಇದೀಗ ಬಾಕ್ಸಿಂಗ್ ಪಟುಗಳಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗಷ್ಟೇ ಮೈಸೂರಿನಲ್ಲಿ ನಡೆದ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಫಾತೀಮಾ ಚಿನ್ನದ ಪದಕ ಗಳಿಸಿದರೆ, ಹಾಜಿರಾ ಬೆಳ್ಳಿ ಪದಕ ಸಂಪಾದಿಸಿದ್ದಾರೆ. ಮಕ್ಕಳು ಗಳಿಸಿದ ಈ ಪದಕಗಳು, ಮಂಗಳಮುಖಿ ಅಕ್ರಂ ಅವರ ಶ್ರಮಕ್ಕೆ ಮತ್ತಷ್ಟು ಬಲ ನೀಡಿದೆ. ಭಿಕ್ಷೆಯನ್ನೇ ನಂಬಿ ಬದುಕುತ್ತಿರುವ ಮಂಗಳಮುಖಿ ಅಕ್ರಂ, ಸಹೃದಯಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ನೆರವಾಗಲಿಚ್ಚಿಸುವವರು ಅಕ್ರಂ ಅವರನ್ನು ದೂ. ಸಂಖ್ಯೆ 9972498797ರ ಮೂಲಕ ಸಂಪರ್ಕಿಸಬಹುದಾಗಿದೆ.
ಕೃಪೆ: ವಿಜಯಕರ್ನಾಟಕ
You must be logged in to post a comment.