ಮೈಸೂರು: ಗಾರ್ಡೆನಿಂಗ್ ಅಥವಾ ಕೈತೋಟ, ಹೂದೋಟಗಳನ್ನು ಬೆಳೆಸುವುದೆಂದರೆ ಹಲವರಿಗೆ ಆಸಕ್ತಿ. ಇನ್ನು ಕೆಲವರು ಮನೆ ಮುಂದಿನ ಅಂಗಳದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಅಲಂಕರಿಸುವುದನ್ನೇ ಹವ್ಯಾಸಮಾಡಿಕೊಂಡಿರುತ್ತಾರೆ. ಅದರಲ್ಲಿಯೂ ಕೆಲವರು, ಉಪಯೋಗಿಸಿ ಬಿಸಾಕಲ್ಪಡುವ ವಸ್ತುಗಳಲ್ಲಿ ಕೂಡ ಹೂ ಗಿಡ, ಶೋ ಗಿಡಗಳನ್ನು ಬೆಳೆದು ಕೌಶಲ್ಯ ತೋರುತ್ತಾರೆ.
ಅದರಂತೆ ಬಗೆಬಗೆಯ ಹೂಗಿಡ, ಮರ-ಬಳ್ಳಿಗಳನ್ನು ಬೆಳೆದು ಸಸ್ಯಕಾಶಿಯನ್ನೇ ಮನೆಯಂಗಳದಲ್ಲಿ ಸೃಷ್ಠಿಸಿ, ತೋಟಗಾರಿಕೆಯನ್ನೇ ಹವ್ಯಾಸವನ್ನಾಗಿ ಮಾಡಿಕೊಂದವರಲ್ಲಿ ಮೈಸೂರಿನ ಹಶ್ಮಾತ್ ಫಾತಿಮಾ ಕೂಡ ಒಬ್ಬರು.
ಮೈಸೂರಿನ ಕಲ್ಯಾಣಗಿರಿ ನಿವಾಸಿ ಕಳೆದ 25 ವರ್ಷಗಳಿಂದ ವಾಸವಾಗಿರುವ ಹಶ್ಮಾತ್ ಫಾತಿಮಾ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಗಿಡಗಳನ್ನು, ಅದರಲ್ಲಿಯೂ ವಿಶೇಷವಾಗಿ ಹೂವಿನ ಗಿಡಗಳನ್ನು ಬೆಳೆಸುವುದರಲ್ಲಿ ವಿಶೇಷ ಆಸಕ್ತಿ. ಫಾತಿಮಾ ಅವರ ಮನೆಯ ಮುಂದೆ ಸುಮಾರು 40ಕ್ಕೂ ಹೆಚ್ಚು ಬಗೆಯ ಹೂವಿನನ ಗಿಡಗಳನ್ನು, ವಿವಿಧ ರೀತಿಯ ಬಳ್ಳಿ-ಮರಗಳನ್ನು ಬೆಳೆಸಿದ್ದಾರೆ.
ವಿಶೇಷವಾಗಿ ಖಾಲಿ ಬಾಟಲ್ ಗಳಲ್ಲಿ, ಉಪಯೋಗಿಸಿ ಬಿಟ್ಟ ಶೂಗಳಲ್ಲಿ, ಟೈಯರ್ ಗಳಲ್ಲಿ ಕೂಡ ಫಾತಿಮಾ ಶೋ ಗಿಡಗಳನ್ನು, ಹೂವಿನ ಗಿಡಗಳನ್ನು ಬೆಳೆಸಿ ಅಂಗಳದಲ್ಲಿ, ಮನೆಯ ಗೋಡೆಗಳ ಮೇಲೆ ಜೋಡಿಸಿಟ್ಟಿದ್ದಾರೆ. ಬಣ್ಣ ಬಣ್ಣದ ಹೂಗಳಿಂದ ಮೈದಳೆದು ನಿಂತಿರುವ ಗಿಡ-ಬಳ್ಳಿಗಳ ನಡುವೆ ಅಲ್ಲಲ್ಲಿ ಕಾಣುವ ಮಣ್ಣಿನ ಕಲಾಕೃತಿಗಳು ಗಾರ್ಡನ್ ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.
ಈ ಬಗ್ಗೆ ಮಾತನಾಡುವ ಹಶ್ಮಾತ್ ಫಾತಿಮಾ, ಉಪಯೋಗಿಸಿ ಬಿಟ್ಟ ಟೈಯರ್, ಬಾಟಲ್, ಬೂಟ್ ಗಳನ್ನು ಬಳಸಿಕೊಂಡ್ು ಹೇಗೆ ತೋಟಗಾರಿಕೆ ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡುವಂತಹ ಹಲವಾರು ಚಾನಲ್ ಗಳನ್ನು, ಪೇಜ್ ಗಳನ್ನು ಇಂಟರ್ ನೆಟ್ ನಲ್ಲಿ ಸರ್ಚ್ ಮಾಡಿ, ಆ ಮೂಲಕ ಗಾರ್ಡೆನಿಂಗ್ ಮಾಡುವ ಬಗ್ಗೆ ತಿಳಿದುಕೊಂಡಿರುವುದಾಗಿ ಹೇಳುತ್ತಾರೆ.
ಮನೆಯ ಸುತ್ತಲು ಮಾವಿನ ಮರ, ಹಾಗೂ ಡೇಲಿಯಾ, ಮಾರಿಗೋಲ್ಡ್, ಝಿನಿಯಾ, ಹೈಬಿಸ್ಕಸ್, ಬೆಗೋನಿಯಾ, ಡೈಸಿ, ವರ್ಬೆನಾ, ಪೆಟುನಿಯಾ, ಆಂಥೂರಿಯಮ್, ಜೆನೊಬಿಯ, ಜೆರೇನಿಯಮ್ ಮತ್ತು ಗ್ಲಾಡಿಯೊಲಾಗಳಂತಹ ಹೂಬಿಡುವ ಸಸ್ಯಗಳನ್ನು ಹೆಚ್ಚಾಗಿ ಬೆಳೆದಿರುವುದಾಗಿ ತಿಳಿಸುತ್ತಾರೆ.
ಮೈಸೂರು ಹಾರ್ಟಿಕಲ್ಚರಲ್ ಸೊಸೈಟಿವತಿಯಿಂದ ಆಯೋಜಿಸುವ ದಸರಾ ಫಲ ಪುಷ್ಪ ಪ್ರದರ್ಶನದಲ್ಲಿ ಹೋಮ್ ಗಾರ್ಡನ್ ವಿಭಾಗದಲ್ಲಿ ಸತತ 11ನೇ ಬಾರಿಗೆ ಫಾತಿಮಾ, ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಫಾತಿಮಾ ಅವರ ಕಲಾತ್ಮಕವಾದ ಗಾರ್ಡೆನಿಂಗ್ ಹವ್ಯಾಸ ನಿಜಕ್ಕೂ ಇತರರಿಗೆ ಮಾದರಿಯಾಗಿದೆ.