ಮೈಸೂರು-ಯಲಹಂಕ ಮೆಮು ರೈಲು ಸೇವೆಗೆ ಚಾಲನೆ

ಮೈಸೂರು: ಮೈಸೂರು – ಬೆಂಗಳೂರು – ಯಲಹಂಕ ನಡುವೆ ಹೊಸ ‘ಮೆಮು’ ರೈಲು ಸೋಮವಾರ ರಾತ್ರಿ ಸಂಚಾರ ಆರಂಭಿಸಿತು. ನೂತನ ಮೆಮು ರೈಲು ಸಂಚಾರಕ್ಕೆ ಸಂಸದ ಪ್ರತಾಪ್​ ಸಿಂಹ ಸೋಮವಾರ ರಾತ್ರಿ ಚಾಲನೆ ನೀಡಿದರು.

ಮೈಸೂರು-ಬೆಂಗಳೂರು ನಡುವೆ ಈಗಾಗಲೇ ಮೂರು ಮೆಮು ರೈಲುಗಳು ಪ್ರತಿನಿತ್ಯ ಸಂಚರಿಸುತ್ತಿದ್ದು, ಇವುಗಳ ಪಟ್ಟಿಗೆ ಮತ್ತೊಂದು ಮೆಮು ರೈಲು ಸೆರ್ಪಡೆ ಯಾಗಿದೆ. ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ನೈರುತ್ಯ ರೈಲ್ವೆ ಸ್ಪಂದಿಸಿದ್ದು, ಈ ರೈಲು ಯಲಹಂಕ ಮಾರ್ಗವಾಗಿ ಸಂಚರಿಸಲಿದೆ.

‘ಮೈಸೂರು – ಬೆಂಗಳೂರು ಮಾರ್ಗವಾಗಿ ರೈಲುಗಳ ಸಂಖ್ಯೆ ಈಗ ಹೆಚ್ಚಿದ್ದು ಪ್ರಯಾಣಿಕರು ಆರಾಮಾಗಿ ಸಂಚರಿಸಲು ಸಾಧ್ಯವಾಗಿದೆ. ಇದಕ್ಕೆ ನಾಲ್ಕನೇ ಸೇರ್ಪಡೆಯಾಗಿ ಈ ‘ಮೆಮು’ ರೈಲು ಸಂಚಾರ ಆರಂಭಿಸಿದೆ’ ಎಂದು ಪ್ರತಾಪಸಿಂಹ ತಿಳಿಸಿದರು.

ಮೈಸೂರಿನಿಂದ ಪ್ರತಿದಿನ ರಾತ್ರಿ 10.20ಕ್ಕೆ ಈ ರೈಲು (06562) ಹೊರಡಲಿದೆ. ರಾತ್ರಿ 1.30ಕ್ಕೆ ಯಲಹಂಕ ನಿಲ್ದಾಣ ತಲುಪಲಿದೆ. ರಾತ್ರಿ 2.30ಕ್ಕೆ ಯಲಹಂಕದಿಂದ ಹೊರಡಲಿರುವ ರೈಲು (06561), ಬೆಳಿಗ್ಗೆ 5.35ಕ್ಕೆ ಮೈಸೂರು ಸೇರಲಿದೆ.

Leave a Comment

Scroll to Top