ಮೈಸೂರು: ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ನಾಗರಹೊಳೆ, ಬಂಡಿಪುರ ಸಫಾರಿ ಮತ್ತೆ ಬಂದ್ ಮಾಡಲಾಗಿದೆ.
ಜುಲೈ 10ರಿಂದ ಮುಂದಿನ ಆದೇಶದವರೆಗೆ ಹೊರ ಜಿಲ್ಲೆ/ರಾಜ್ಯ/ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಹೆಚ್.ಡಿ.ಕೋಟೆ ತಾಲೂಕಿನ ಎಲ್ಲ ಹೋಟೆಲ್, ರೆಸಾರ್ಟ್, ಲಾಡ್ಜ್, ಹೋಂ ಸ್ಟೇಗಳಲ್ಲಿ ವಸತಿ ಸೌಕರ್ಯ ನೀಡಕೂಡದು. ಮುಂದಿನ ಹೊರಭಾಗದ ಪ್ರವಾಸಿಗರ ಆನ್‍ಲೈನ್ ಅಥವಾ ಆಫ್‍ಲೈನ್ ಮುಂತಾದ ರೂಪದ ಬುಕ್ಕಿಂಗ್ ಮಾಡಿಕೊಳ್ಳಬಾರದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.
ಇಂದು ಮಾಧ್ಯಮ ಹೇಳಿಕೆ ನೀಡಿರುವ ಅವರು ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹೊರರಾಜ್ಯ ಮತ್ತು ವಿದೇಶದಿಂದ ಬರುವ ಪ್ರವಾಸಿಗರು ಹೋಟೆಲ್, ಹೋಂ ಸ್ಟೇ, ರೆಸಾರ್ಟ್ , ಲಾಡ್ಜ್ ವಸತಿಗೃಹಗಳಲ್ಲಿ ಸೌಕರ್ಯ ನೀಡದಂತೆ ಈ ಜಿಲ್ಲೆಗಳಲ್ಲಿ ಉಲ್ಲೇಖ(2)ರಿಂದ(4) ರಲ್ಲಿ ಆದೇಶ ಹೊರಡಿಸಲಾಗಿರುವುದರಿಂದ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೋ ಸ್ಟೇ, ರೆಸಾರ್ಟ್, ಲಾಡ್ಜ್ , ವಸತಿ ಗೃಹಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿರುತ್ತದೆ. ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಿ ಸುರಕ್ಷತಾ ಕ್ರಮಗಳ ಬಗ್ಗೆ ಮುತುವರ್ಜಿ ಹಾಗೂ ಕಾಳಜಿ ವಹಿಸದಿರುವ ಬಗ್ಗೆ ಜನತೆ ಆತಂಕಗೊಂಡಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುವುದರಿಂದ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ವ್ಯಾಪ್ತಿಗೆ ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರು ಆಗಮಿಸದಂತೆ ನಿರ್ಬಂಧಿಸುವ ಸಲುವಾಗಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸಾಂಕ್ರಾಮಿಕ ರೋಗಗಳು ಕೋವಿಡ್-19 ರೆಗಯೂಲೇಷನ್ಸ್-202020 ಮತ್ತು 34ರಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೋಟೆಲ್, ಹೋಂಸ್ಟೇ, ರೆಸಾರ್ಟ್, ಲಾಡ್ಜ್ ವಸತಿಗೃಹಗಳಿಗೆ ಪ್ರವಾಸಿಗರು ಆಗಮಿಸದಂತೆ ನಿರ್ಬಂಧ ವಿಧಿಸಿದ್ದಾರೆ.
10/07/2020ರಿಂದ ಮುಂದಿನ ಆದೇಶದವರೆಗೆ ಹೊರಜಿಲ್ಲೆ/ರಾಜ್ಯ/ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಹೆಚ್.ಡಿ.ಕೋಟೆ ತಾಲೂಕಿನ ಎಲ್ಲಾ ಹೋಟೆಲ್, ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ವಸತಿಗೃಹ ಇತ್ಯಾದಿಗಳಲ್ಲಿ ವಸತಿ ಸೌಕರ್ಯ ನೀಡಬಾರದು. ಅಲ್ಲದೆ ಇನ್ನು ಮುಂದೆ ಜಿಲ್ಲೆಯ ಹೊರಭಾಗದ ಪ್ರವಾಸಿಗರ ಆನ್ ಲೈನ್/ಆಫ್ ಲೈನ್ ಮುಂತಾದ ಯಾವುದೇ ರೂಪದ ಬುಕ್ಕಿಂಗ್ ಸ್ವೀಕರಿಸಬಾರದು. ಹಾಲಿ ಆಗಮಿಸಿ ವಸತಿ ಸೌಕರ್ಯವನ್ನು ಹೊಂದಿರುವ ಪ್ರವಾಸಿಗರನ್ನು ಬಲವಂತವಾಗಿ ವಾಪಸ್ ಕಳುಹಿಸದೆ ಅವರು ಈಗಾಗಲೇ ವಾಸ್ತವ್ಯಕ್ಕಾಗಿ ಕಾಯ್ದಿರಿಸಿದ ಅವಧಿ ಪೂರ್ಣಗೊಳ್ಳುವವರೆಗೆ ಕಾಯಬೇಕು. ಪ್ರವಾಸಿ ಉದ್ದೇಶಕ್ಕಾಗಿ ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿ ಆಗಮಿಸಿರದಿದ್ದಲ್ಲಿ ಅವರು ಆಗಮಿಸುವ ಮುಂಚಿತವಾಗಿ ಅವರಿಗೆ ಸೂಕ್ತ ಮಾಹಿತಿ ನೀಡಿ ಬುಕ್ಕಿಂಗ್ ರದ್ದು ಮಾಡಬೇಕು.ಈ ನಿರ್ಬಂಧಗಳು ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿ ಬರುವ ದಮ್ಮನಕಟ್ಟೆ, ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳಲ್ಲಿ ಬರುವ ಎಲ್ಲಾ ಸಫಾರಿಗೂ ಅನ್ವಯಯವಾಗಲಿದೆ. ಆದೇಶ ಮೀರಿದಲ್ಲಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.