ನಾಸಾ ಮಾಜಿ ವಿಜ್ಞಾನಿ, ಮೈಸೂರಿನ ನವರತ್ನ ರಾಜಾರಾಮ್‍ ನಿಧನ

ಮೈಸೂರು: ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ನಾಸಾ ದ ಮಾಜಿ ವಿಜ್ಞಾನಿ, ಹಿರಿಯ ವಿದ್ವಾಂಸರಾದ ಡಾ. ನವರತ್ನ ಶ್ರೀನಿವಾಸ ರಾಜಾರಾಮ್ (76 ) ನಿಧನರಾಗಿದ್ದಾರೆ. 1943ರಲ್ಲಿ ಮೈಸೂರಿನಲ್ಲಿ ಜನಿಸಿದ್ದ ರಾಜಾರಾಮ್ ಖ್ಯಾತ ಸಾಹಿತಿಗಳಾದ ನವರತ್ನ ರಾಮರಾಯರ ಮೊಮ್ಮಗನಾಗಿದ್ದರು.

ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದ ರಾಜಾರಾಮ್ ಎರಡು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಭಾರತದ ಮೂಲ ನಿವಾಸಿಗಳು ಆರ್ಯರಲ್ಲ ಎಂಬ ವಾದವನ್ನು ಒಪ್ಪಿಕೊಂಡಿದ್ದ ಅವರು, ಅದಕ್ಕೆ ತಮ್ಮ ಸಂಶೋಧನೆಗಳ ಮೂಲಕ ಆಧಾರವನ್ನು ಒದಗಿಸಿದ್ದರು.

ನಾಸಾದಲ್ಲಿ ಕೆಲ ಸಮಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದ ರಾಜಾರಾಮ್ ಬಳಿಕ ಭಾರತೀಯ ಇತಿಹಾಸ, ಸಂಸ್ಕೃತಿ, ರಾಷ್ಟ್ರಚಿಂತನೆಗಳ ಕುರಿತು ಒಲವು ತೋರಿದ್ದರು. ಈ ಸಂಬಂಧ ಅವರು ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ಉತ್ತರ ಕರ್ನಾಟಕ ದೇಶಸ್ಥ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಇವರ ಕುಟುಂಬಿಕರು ಒಂದೇ ತಲೆಮಾರಿನಲ್ಲಿ ಒಂಬತ್ತು ವಿದ್ವಾಂಸರನ್ನು ಹೊಂದಿದ್ದರು. ಹಾಗಾಗಿ “ನವರತ್ನ” ಎಂಬ ಹೆಸರು ಇವರ ಕುಟುಂಬಕ್ಕೆ ಬಂದಿತ್ತು.

1900ರ ವರ್ಷದಲ್ಲಿ ಅಮಲ್ದಾರರಾಗಿ ನೇಮಕಹೊಂದಿದ್ದ ರಾಜಾರಾಮ್‍ ಅವರ ಅಜ್ಜ ನವರತ್ನ ರಾಮರಾಯರು ಮೈಸೂರು ಮಹಾರಾಜರ ಕಾಲದಲ್ಲಿ ಅನೇಕ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದರು. ಇವರ ಕಾಲದಲ್ಲೇ ರಾಜ್ಯದಲ್ಲಿ ರೇಷ್ಮೆ ಉದ್ಯಮ ಸ್ಥಾಪಿಸಲು ಸಾಧ್ಯವಾಗಿದ್ದು. ನವರತ್ನ ರಾಮರಾಯರ ಕುಟುಂಬ ಮೈಸೂರಿನಲ್ಲಿ ಹಲವು ದಶಕಗಳ ಕಾಲ ವಾಸವಿತ್ತು. ಈ ವೇಳೆ ಮೈಸೂರಿನಲ್ಲೇ ಜನಿಸಿದ್ದ ನವರತ್ನ ರಾಜಾರಾಮ್‍, ಪ್ರಾಥಮಿಕ ವಿದ್ಯಾಭ್ಯಾಸವನ್ನು ಇಲ್ಲೇ ಮಾಡಿದ್ದರು.

Leave a Comment

Scroll to Top