ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

ಮೈಸೂರು: ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದ್ದು ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಸಿಂಗಪೂರ ಮೃಗಾಲಯದಿಂದ ಒಂದು ಹೆಣ್ಣು ಚಿಂಪಾಂಜಿ ಹಾಗೂ ಗುಜರಾತ್ ಮೃಗಾಲಯದಿಂದ ಭಾರತೀಯ ಸಿಂಹಗಳು ಆಗಮಿಸಿವೆ.

ಮೃಗಾಲಯದಲ್ಲಿರುವ ಒಂಟಿ ಪ್ರಾಣಿಗಳ ಜೊತೆಗೂಡಿಸುವಿಕೆ ಹಾಗೂ ಅನುಮೋದಿತ ಪ್ರಾಣಿಸಂಗ್ರಹಣಾ ಯೋಜನೆಯನ್ನು ಉತ್ಕೃಷ್ಠಗೊಳಿಸುವ ನಿಟ್ಟಿನಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಸಿಂಗಪೂರ ಮೃಗಾಲಯದಿಂದ ಒಂದು ಹೆಣ್ಣು ಚಿಂಪಾಂಜಿಯು ಮೈಸೂರು ಮೃಗಾಲಯಕ್ಕೆ ಆಗಮಿಸಿದೆ.

ಸುಮಾರು 14 ವರ್ಷ ವಯಸ್ಸಿನ ರಾಹ್ ಎಂಬ ಹೆಸರಿನ ಹೆಣ್ಣು ಚಿಂಪಾಂಜಿಯು ಸುರಕ್ಷಿತವಾಗಿದ್ದು, ಪ್ರಸ್ತುತ ಅದನ್ನು ದಿಗ್ಬಂಧನ ಆವರಣದಲ್ಲಿರಿಸಿ ನಿಗಾವಹಿಸಲಾಗಿದೆ. ಇದಕ್ಕೆ ಬದಲಿಯಾಗಿ ಮೈಸೂರು ಮೃಗಾಲಯದಿಂದ ರಾಣಿ ಎಂಬ ಹೆಸರಿನ ಒಂದು ಹೆಣ್ಣು ಸ್ಲಾತ್ ಕರಡಿಯನ್ನು ಬೆಂಗಳೂರು ವಿಮಾನ ಮಾರ್ಗದ ಮೂಲಕ ಸಿಂಗಪೂರ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆಯಡಿ, ಗುಜರಾತಿನ ಸಕ್ಕರ್‍ಬಾಗ್ ಮೃಗಾಲಯದಿಂದ ಎರಡು ಜೊತೆ ಭಾರತೀಯ ಸಿಂಹಗಳನ್ನು(ಎರಡು ಗಂಡು, ಎರಡು ಹೆಣ್ಣು) ಮೈಸೂರು ಮೃಗಾಲಯಕ್ಕೆ ತರಲಾಗಿದ್ದು, ಅವುಗಳಲ್ಲಿ ಒಂದು ಜೊತೆ ಸಿಂಹಗಳನ್ನು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ.

Scroll to Top